
ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತನಿಖಾ ಸಮಿತಿ ರಚಿಸಿರುವುದಕ್ಕೆ ಮೇಲ್ನೋಟಕ್ಕೆ ಕಾನೂನಿನಲ್ಲಿ ಯಾವುದೇ ಅಡೆತಡೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
‘ಈ ಕುರಿತ ಪ್ರಸ್ತಾವ ರಾಜ್ಯಸಭೆಯಲ್ಲಿ ತಿರಸ್ಕೃತಗೊಂಡಿದ್ದರೂ ಲೋಕಸಭಾ ಸ್ಪೀಕರ್ ತನಿಖಾ ಸಮಿತಿ ರಚಿಸಬಹುದಾಗಿದೆ. ಅದಕ್ಕೆ ನ್ಯಾಯಮೂರ್ತಿಗಳ ವಿಚಾರಣಾ ಕಾಯ್ದೆಯಲ್ಲಿ ಯಾವುದೇ ನಿರ್ಬಂಧವಿಲ್ಲ’ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನು ಒಳಗೊಂಡ ಪೀಠ ಹೇಳಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ‘ವಾಗ್ದಂಡನೆ ಕುರಿತ ನಿರ್ಣಯಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಂದೇ ದಿನ ಮಂಡಿಸಿ ಅಂಗೀಕಾರವಾದರೆ, ನ್ಯಾಯಮೂರ್ತಿಗಳ ವಿಚಾರಣಾ ಕಾಯ್ದೆ–1968ರ ನಿಬಂಧನೆಗಳ ಪ್ರಕಾರ ಎರಡೂ ಸದನಗಳು ಜಂಟಿಯಾಗಿ ತನಿಖಾ ಸಮಿತಿ ರಚಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ರಾಜ್ಯಸಭೆಯು ನಿರ್ಣಯವನ್ನು ತಿರಸ್ಕರಿಸಿದೆ ಮತ್ತು ಲೋಕಸಭೆಯ ಸ್ಫೀಕರ್ ತನಿಖಾ ಸಮಿತಿ ರಚಿಸಿದ್ದಾರೆ. ಅದು ಸರಿಯಲ್ಲ’ ಎಂದರು.
ರಾಜ್ಯಸಭೆಯ ಸಭಾಪತಿಯಾಗಿದ್ದ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದ ಬಳಿಕ, ಉಪ ಸಭಾಪತಿ ಅವರು ಈ ಪ್ರಸ್ತಾವವನ್ನು ತಿರಸ್ಕರಿಸಲು ಸಮರ್ಥರಲ್ಲ ಎಂದೂ ಅವರು ವಾದಿಸಿದರು.
ಈ ಕುರಿತ ರೋಹಟಗಿ ಅವರ ವಾದವನ್ನು ಒಪ್ಪದ ಪೀಠವು, ‘ಜಂಟಿ ತನಿಖಾ ಸಮಿತಿ ರಚನೆಯಿಂದ ನ್ಯಾ. ವರ್ಮಾ ಅವರಿಗೆ ಅನುಕೂಲವಾಗುತ್ತದೆಯೇ ಎಂಬುದನ್ನು ಗಮನಿಸಬೇಕಿದೆ. ಇಲ್ಲಿ ಸಂವಿಧಾನದ 32ನೇ ವಿಧಿಯಡಿ ಮಧ್ಯಪ್ರವೇಶಿಬಹುದೇ ಎಂಬುದನ್ನು ಮಾತ್ರ ನಾವು ನೋಡಬೇಕಿದೆ’ ಎಂದು ಹೇಳಿತು.
ಯಶವಂತ್ ಅವರ ಅಧಿಕೃತ ನಿವಾಸದಲ್ಲಿ 2025ರ ಮಾರ್ಚ್ 14ರಂದು ಅರೆ ಸುಟ್ಟ ನೋಟುಗಳ ಕಂತೆಗಳು ಪತ್ತೆಯಾಗಿದ್ದವು. ಈ ಸಂಬಂಧ ನ್ಯಾಯಮೂರ್ತಿಗಳ ವಿಚಾರಣಾ ಕಾಯ್ದೆಯಡಿ ರಚಿಸಲಾಗಿರುವ ಸಮಿತಿಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ವರ್ಮಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.
‘ಎರಡೂ ಸದನಗಳಲ್ಲಿ ಪ್ರಸ್ತಾವ ಅಂಗೀಕಾರವಾಗದ ಹೊರತು ಯಾವುದೇ ಸಮಿತಿಯನ್ನು ರಚಿಸಲು ಆಗದು. ಒಂದು ವೇಳೆ ಎರಡೂ ಸದನಗಳಲ್ಲಿ ಅಂಗೀಕಾರವಾಗಿದ್ದರೆ ಸ್ಪೀಕರ್ ಮತ್ತು ಸಭಾಪತಿ ಜಂಟಿಯಾಗಿ ತನಿಖಾ ಸಮಿತಿ ರಚಿಸಬೇಕು ಎಂದು ಕಾಯ್ದೆಯ ಸೆಕ್ಷನ್ 3(2) ಹೇಳುತ್ತದೆ. ಹೀಗಾಗಿ ಲೋಕಸಭೆ ರಚಿಸಿರುವ ತನಿಖಾ ಸಮಿತಿ ಕಾನೂನು ಬಾಹಿರ’ ಎಂದು ರೋಹಟಗಿ ವಾದಿಸಿದರು.
ಇದನ್ನು ಒಪ್ಪದ ಪೀಠವು, ಒಂದು ಸದನ ಪ್ರಸ್ತಾವವನ್ನು ತಿರಸ್ಕರಿಸಿದರೆ ಇನ್ನೊಂದು ಸದನ ವಿಚಾರಣೆ ನಡೆಸಬಾರದು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಿಲ್ಲ ಎಂದಿತು.
ಒಂದು ವೇಳೆ ರಾಜ್ಯಸಭೆಯಲ್ಲಿ ಪ್ರಸ್ತಾವ ಅಂಗೀಕಾರವಾಗಿದ್ದರೆ ವರ್ಮಾ ಅವರಿಗೆ ಜಂಟಿ ತನಿಖಾ ಸಮಿತಿಯ ಪ್ರಯೋಜನ ದೊರೆಯುತ್ತಿತ್ತು ಎನಿಸುತ್ತದೆ ಎಂಬುದನ್ನು ಗಮನಿಸಿದ ಪೀಠವು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.