ADVERTISEMENT

ನ್ಯಾಯಮೂರ್ತಿ ಬಳಿ ಕ್ಷಮೆ ಕೋರಿ: ಮಿತಿಮೀರಿದ ವಕೀಲರಿಗೆ ಸುಪ್ರೀಂ ಕೋರ್ಟ್‌ ತಾಕೀತು

ಪಿಟಿಐ
Published 23 ಜನವರಿ 2026, 15:44 IST
Last Updated 23 ಜನವರಿ 2026, 15:44 IST
New Delhi: Supreme Court of India, in New Delhi, Monday, July 31, 2023. (PTI Photo) (PTI07_31_2023_000154B)
New Delhi: Supreme Court of India, in New Delhi, Monday, July 31, 2023. (PTI Photo) (PTI07_31_2023_000154B)   

ನವದೆಹಲಿ: ಪ್ರಕರಣವೊಂದರ ವಿಚಾರಣೆ ವೇಳೆ ‘ಮಿತಿ ದಾಟದಿರಿ’ ಎಂದು ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದ ಜಾರ್ಖಂಡ್‌ನ ವಕೀಲರೊಬ್ಬರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಪೀಠದ ಮುಂದೆ ಹಾಜರಾಗಿ ಕ್ಷಮೆ ಯಾಚಿಸುವಂತೆ ಶುಕ್ರವಾರ ಸೂಚಿಸಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿಯವರ ಜೊತೆ ವಾಗ್ವಾದ ನಡೆಸಿದ್ದಕ್ಕೆ ವಕೀಲರಿಗೆ ತಾಕೀತು ಮಾಡಿದ ನ್ಯಾಯಪೀಠವು, ಕ್ಷಮೆಯಾಚನೆಯನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ನ್ಯಾಯಪೀಠವು ಹೈಕೋರ್ಟ್‌ಗೆ ವಿನಂತಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಅರ್ಜಿಯನ್ನು ವಿಲೇವಾರಿ ಮಾಡಿದೆ.

ಜಾರ್ಖಂಡ್‌ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೇಶ್‌ ಕುಮಾರ್ ಅವರು 2025ರ ಅ.16ರಂದು ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ, ವಕೀಲ ಮಹೇಶ್‌ ತಿವಾರಿ ಅವರು ತಮ್ಮದೇ ವಾದ ಸರಣಿ ಮಂಡಿಸುವ ಮೂಲಕ ಅಗೌರವ ತೋರಿದ್ದರು. ಹೈಕೋರ್ಟ್‌ ಈ ಕುರಿತಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ನೋಟಿಸ್‌ ನೀಡಿತ್ತು.

ADVERTISEMENT

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ಅನುಚಿತ ನಡವಳಿಕೆ ಆರೋಪದಡಿ ವಕೀಲರಿಗೆ ನೋಟಿಸ್‌ ನೀಡಿತ್ತು. ಇದನ್ನು ಪ್ರಶ್ನಿಸಿ ವಕೀಲ ಮಹೇಶ್ ತಿವಾರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸುವ ಮುನ್ನ ಸೂರ್ಯಕಾಂತ್‌ ಮತ್ತು ಬಾಗ್ಚಿ ಇಬ್ಬರೂ ವಕೀಲರ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.