ಉಪಗ್ರಹಣ ಉಡಾವಣೆ
ನವದೆಹಲಿ: ಮುಂದಿನ 15 ವರ್ಷಗಳಲ್ಲಿ ಭಾರತವು 119 ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಯೋಜನೆಯು ಭೂಮಿಗೆ ಸಂಬಂಧಿಸಿದ 80 ಉಪಗ್ರಹಗಳು, ಸಾಗರ ಮತ್ತು ಪರಿಸರಕ್ಕೆ ಸಂಬಂಧಿಸಿದ 23 ಉಪಗ್ರಹಗಳು, ತಂತ್ರಜ್ಞಾನಕ್ಕೆ ಸಂಬಂಧಿಸಿದ 16 ಉಪಗ್ರಹಗಳ ಉಡಾವಣೆ ಉದ್ದೇಶವನ್ನು ಒಳಗೊಂಡಿದೆ. ಭೂಮಿಯಲ್ಲಿನ ಹವಾಗುಣ ಅಧ್ಯಯನಕ್ಕೆ ಸಂಬಂಧಿಸಿದಂತೆ ಉಪಗ್ರಹಗಳಿಗೆ ಯೋಜನೆಯಡಿ ಆದ್ಯತೆ ನೀಡಲಾಗಿದೆ.
ಮುಂದಿನ ಎರಡು ದಶಕಗಳಲ್ಲಿ ಮಂಗಳ ಗ್ರಹದ ಮೇಲೆ ಇಳಿಯುವುದೂ ಸೇರಿ 2040ರ ವೇಳೆಗೆ ಭಾರತೀಯರು ಚಂದ್ರನ ಮೇಲೆ ಕಾಲಿಡುವ ಮೊದಲೇ ಕನಿಷ್ಠ 5 ಮಾನವ ರಹಿತ ಚಂದ್ರಯಾನ ಯೋಜನೆ ಹಮ್ಮಿಕೊಳ್ಳುವ ಯೋಜನೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2028ರ ಮಾರ್ಚ್‌ನಲ್ಲಿ ‘ಶುಕ್ರಯಾನ’ ಯೋಜನೆ ಹಮ್ಮಿಕೊಳ್ಳುವ ಗುರಿಯನ್ನು ಭಾರತ ಹೊಂದಿದೆ.
ದೇಶದ ‘ಗಗನಯಾನ ಕಾರ್ಯಕ್ರಮ’ಕ್ಕೆ ಆಯ್ಕೆಯಾಗಿರುವ ನಾಲ್ವರು ಗಗನಯಾನಿಗಳು ಭಾರತದ ಬಾಹ್ಯಾಕಾಶ ಯಾತ್ರೆಯ ಭವಿಷ್ಯವನ್ನು ಪ್ರತಿಬಿಂಬಿಸುತ್ತಾರೆ’ ಎಂದು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಧುನಿಕ ಬಾಹ್ಯಾಕಾಶ ವಿಜ್ಞಾನವು ಭಾರತ ಪ್ರಾಚೀನ ನಾಗರಿಕತೆಯ ಜ್ಞಾನವನ್ನು ಎದುರು ನೋಡುತ್ತಿತ್ತು. ನಾವು ಹಿಂದೆಯೇ ಖಗೋಳ ಕ್ಷೇತ್ರದಲ್ಲಿ ಮುಂದೆ ಇದ್ದೆವು. ಇಡೀ ಪ್ರಪಂಚವೇ ನಮ್ಮನ್ನು ಹಿಂಬಾಲಿಸುತ್ತಿತ್ತು. ಈಗ ಮತ್ತೆ ನಾವು ಈ ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದೇವೆ’ ಎಂದು ಅವರು ಹೇಳಿದರು.
‘ಬಾಹ್ಯಾಕಾಶ ಸಂಶೋಧನೆಗಳು ಭೂಮಿಯ ಮೇಲಿನ ಜೀವನದೊಂದಿಗೆ ಸಂಪರ್ಕ ಹೊಂದಿರಬೇಕು’ ಎಂದು ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್ ಹೇಳಿದರು.
‘ಕಕ್ಷೆಯಿಂದ ಭೂಮಿಯನ್ನು ನೋಡಿದಾಗ ಅದು ಹೊಸ ದೃಷ್ಟಿಕೋನವನ್ನು ನೀಡಿತು’ ಎಂದು ಗಗನಯಾನಿ ಶುಭಾಂಶು ಶುಕ್ಲಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.