ADVERTISEMENT

ನಾಯಕರನ್ನು ಮುಜುಗರಕ್ಕೊಳಪಡಿಸಿದ ಪೋಸ್ಟರ್, ದೆಹಲಿಯ ರಸ್ತೆ ಸ್ವಚ್ಛವಾಗಿದ್ದು ಹೀಗೆ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 12:02 IST
Last Updated 26 ಮಾರ್ಚ್ 2019, 12:02 IST
   

ದೆಹಲಿ: ದಕ್ಷಿಣ ದೆಹಲಿಯ ಸತ್ಗುರು ರಾಮ್ ಸಿಂಗ್ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದು,ಆ ವಾಸನೆ ಸಹಿಸಿಕೊಂಡೇ ಜನರು ಆ ದಾರಿಯಾಗಿ ಪ್ರಯಾಣಿಸುತ್ತಿದ್ದರು.ತರುಣ್ ಭಲ್ಲಾ ಎಂಬ ರೋಬೋಟಿಕ್ ಎಂಜಿನಿಯರ್ ಕೂಡಾ ತನ್ನ ಕಚೇರಿ ತಲುಪಲು ಇದೇ ದಾರಿಯಾಗಿ ಪ್ರಯಾಣಿಸಬೇಕಿತ್ತು.ಕಳೆದ ಎಂಟು ತಿಂಗಳಿನಿಂದ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ಪ್ರಯಾಣ ದುಸ್ತರವಾಗಿದೆ, ಈ ಬಗ್ಗೆ ಸ್ಥಳೀಯ ಆಡಳಿತಾಧಿಕಾರಿಗಳ ಕಚೇರಿಗೆ ಹೋಗಿ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ,
ಹಾಗಾಗಿ ತರುಣ್ ಭಲ್ಲಾ ಅವರೇ ವಿನೂತನ ಪ್ರತಿಭಟನೆಯೊಂದನ್ನು ಕೈಗೊಳ್ಳುವ ಮೂಲಕ ರಸ್ತೆ ಸ್ವಚ್ಛ ಮಾಡಿಸಿದ್ದಾರೆ. ಈ ಬಗ್ಗೆ ನ್ಯೂಸ್ ಲಾಂಡ್ರಿ ವರದಿ ಮಾಡಿದೆ.

ಪ್ರತಿಭಟನೆ ಹೀಗಿತ್ತು
ನಮ್ಮ ದೇಶ ಅತಿ ಶಕ್ತಿಶಾಲಿ ದೇಶವಾಗಿ ಹೊರ ಹೊಮ್ಮುತ್ತಿದೆ. 1 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಹೊಂದಿದ್ದರೂ ಜನ ಜೀವನ ದುಸ್ತರವಾಗಿದೆ.ಇಲ್ಲಿ ಕೊಳಚೆ ನೀರು ಹರಿಯುತ್ತಿದೆ. ಒಂದು ದಿನ ನಾನು ಆಮ್ ಆದ್ಮಿ ಪಕ್ಷದ ಪೋಸ್ಟರ್‌ವೊಂದನ್ನು ನೋಡಿದೆ. ಕೇಜ್ರಿವಾಲ್ ದೆಹಲಿಯಲ್ಲಿ ಟಾಯ್ಲೆಟ್ ಸೌಲಭ್ಯ ಕಲ್ಪಿಸಿದ್ದರ ಬಗ್ಗೆ ಪೋಸ್ಟರ್ ಅದಾಗಿತ್ತು.ನಾನೊಬ್ಬ ರೋಬೋಟಿಕ್ ಎಂಜಿನಿಯರ್ ಮತ್ತು ಉದ್ಯಮಿ. ಆ ಸಮಯದಲ್ಲಿ ಪೋಸ್ಟರ್‌ವೊಂದನ್ನು ಮಾಡುವ ಯೋಚನೆ ಹೊಳೆಯಿತು. ಹಾಗಾಗಿ ನಾನು ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್‍ನ ದೊಡ್ಡ ಪೋಸ್ಟರ್‌ ಮಾಡಿದೆ. ಅದರಲ್ಲಿ ಈ ಪಕ್ಷದ ನಾಯಕರ ಚಿತ್ರದ ಜತೆಗೆ ಆಪ್ ಹಮೇ ವೋಟ್ ದೋ, ಹಮ್ ಆಪ್ ಕೋ ಕೀಚಡ್,ಡೆಂಗಿ ಔರ್ಮಲೇರಿಯಾ ದೇಂಗೆ.(ನೀವು ನನಗೆ ಮತ ನೀಡಿ, ನಾವುನಿಮಗೆ ಡೆಂಗಿ, ಮಲೇರಿಯಾ ಮತ್ತು ಕೊಳಕು ನೀಡುತ್ತೇವೆ)ಎಂದು ಬರೆದೆ.

ಚರಂಡಿ ನೀರು ಹರಿಯಲುಮುಕ್ತ ವ್ಯವಸ್ಥೆ ಎಂಬ ಹೆಸರಿನ ಕಾರ್ಯಕ್ರಮದ ಉದ್ಘಾಟನೆ ಇದೆ ಎಂದು ತರುಣ್ ಅವರುಅಲ್ಲಿನ ಸ್ಥಳೀಯ ಪ್ರತಿನಿಧಿಗಳಾದ ಸಂಸದೆ ಮೀನಾಕ್ಷಿ ಲೇಖಿ ಮತ್ತು ಶಾಸಕ ಶಿವ ಚರಣ್ ಗೋಯಲ್ ಅವರಿಗೆ ಆಮಂತ್ರಣ ಕಳುಹಿಸಿದ್ದರು.ತರುಣ್ ಅಂಟಿಸಿದ ಪೋಸ್ಟರ್‌ನಲ್ಲಿ ಈ ಇಬ್ಬರ ಚಿತ್ರಗಳೂ ಇವೆ.

ADVERTISEMENT

ಈ ಕಾರ್ಯಕ್ರಮ ಏನೆಂದು ನೋಡಲು ನೂರಾರು ವ್ಯಾಪಾರಿಗಳು, ದಾರಿಹೋಕರೂ ಬಂದಿದ್ದರು. ನನ್ನ 11ರ ಹರೆಯದ ಮಗಳೂ ಈ ಕಾರ್ಯಕ್ರಮಕ್ಕೆ ಬರುವಂತೆ ಮಾಡಿದೆ. ರಿಬ್ಬನ್ ಕಟ್ ಮಾಡಿದ್ದು ಅವಳೇ.ಜೀವನದಲ್ಲಿ ನಾವು ಹೇಗೆ ಹೋರಾಡಬೇಕೆಂದು ಅವಳೂ ತಿಳಿಯಲಿ ಎಂಬುದು ನನ್ನ ಉದ್ದೇಶವಾಗಿತ್ತು.ಅಲ್ಲಿ ರಿಬ್ಬನ್ ಕತ್ತರಿಸಿ ಲಡ್ಡು ಹಂಚಿದೆವು. ನಮ್ಮ ದೇಶದ ಪ್ರಗತಿಯ ಬಗ್ಗೆ ಘೋಷಣೆಯನ್ನೂ ಕೂಗಿದ್ದಾಯಿತು.

ಈ ಕಾರ್ಯಕ್ರಮ ಮಾರ್ಚ್ 3, ಶನಿವಾರ 11 ಗಂಟೆಗೆ ನಡೆದಿತ್ತು.ಇದಾಗಿ ಅರ್ಧ ಗಂಟೆಯಲ್ಲಿಯೇ ಲೋಕೋಪಯೋಗಿ ಇಲಾಖೆಯ ಟ್ರಕ್ ಬಂದು ಅಲ್ಲಿನ ಕೊಳಚೆ ನೀರನ್ನು ಸ್ವಚ್ಛ ಮಾಡಿತು. ಸೋಮವಾರದ ಹೊತ್ತಿಗೆ ಆ ರಸ್ತೆಯೆಲ್ಲಾ ಸ್ವಚ್ಛವಾಗಿ ನಾವು ಅಲ್ಲಿ ಅಂಟಿಸಿದ್ದ ಪೋಸ್ಟರ್‌ಗಳನ್ನು ಕೂಡಾ ತೆಗೆದುಕೊಂಡು ಹೋಗಿದ್ದರು.
ಅದೇನೇ ಕಾರ್ಯ ಆಗಬೇಕಿದ್ದರೂ ರಾಜಕಾರಣಿಗಳನ್ನು ಮುಜುಗರಕ್ಕೊಳಪಡಿಸಬೇಕು. ಈ ಬಾರಿ ಚುನಾವಣೆ ಇರುವಕಾರಣ ಹೀಗೆ ಮಾಡಿದರೆ ನಮ್ಮ ಕೆಲಸ ಆಗುತ್ತದೆ ಎಂದು ಗೊತ್ತಿತ್ತು ಅಂತಾರೆ ತರುಣ್.

ಈ ದಾರಿ ಬಳಸಿದ್ದು ಯಾಕೆ?
ಹಿಂಸೆಯ ಮಾರ್ಗ ನನಗೆ ಇಷ್ಟವಿಲ್ಲ, ಇದನ್ನು ಸರಿಮಾಡಲು ಎಂಸಿಡಿ ಅಧಿಕಾರಿಗಳಿಗೆ ಲಂಚ ಕೊಡುವುದೂ ನನಗೆ ಇಷ್ಟವಿಲ್ಲ.ಒಬ್ಬ ಸಾಮಾನ್ಯ ಮನುಷ್ಯನಾಗಿರುವ ನನಗೆ ಬೆಂಬಲಿಗರ ಸಂಖ್ಯೆ ಕಡಿಮೆ ಇದ್ದರೂ ಪ್ರಜ್ಞೆ ಇದ್ದ ಕಾರಣ ನಾನು ಈ ಕೆಲಸ ಮಾಡಿದೆ ಎಂದು ತರುಣ್ ಭಲ್ಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.