ಪಟ್ನಾ: ವಿಧಾನಸಭೆ ವಿರೋಧ ಪಕ್ಷದ ನಾಯಕ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ನಡೆಸುತ್ತಿರುವ ‘ಬಿಹಾರ ಅಧಿಕಾರ ಯಾತ್ರೆ’ಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಕುರಿತು ಕೆಟ್ಟ ಪದಗಳಲ್ಲಿ ನಿಂದಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ‘ಮತದಾರರ ಅಧಿಕಾರ ಯಾತ್ರೆ’ಯನ್ನು ಕೈಗೊಂಡಿದ್ದರು. ‘ಬಿಹಾರದ ದರ್ಭಂಗಾದಲ್ಲಿ ನಡೆದ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ತಾಯಿಯನ್ನು ನಿಂದಿಸಲಾಗಿದೆ’ ಎಂದು ಈ ಹಿಂದೆ ಬಿಜೆಪಿ ಆರೋಪಿಸಿತ್ತು. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು.
ಬಿಹಾರದಲ್ಲಿ ದಿನೇ ದಿನೇ ಚುನಾವಣಾ ಕಣ ರಂಗೇರುತ್ತಿದ್ದು, ಪ್ರಧಾನಿ ಮೋದಿ ಅವರ ತಾಯಿಯನ್ನು ನಿಂದಿಸಲಾಗುತ್ತಿದೆ ಎಂದು ಬಿಜೆಪಿಯ ಆರೋಪವು ಪದೇ ಪದೇ ಕೇಳಿ ಬರುತ್ತಿದೆ.
‘ತೇಜಸ್ವಿ ಅವರ ಯಾತ್ರೆಯ ವೇಳೆಯ ವೇದಿಕೆ ಕಾರ್ಯಕ್ರವೊಂದರಲ್ಲಿ ಆರ್‌ಜೆಡಿ ಕಾರ್ಯಕರ್ತರು ಪ್ರಧಾನಿ ಮೋದಿ ಅವರ ತಾಯಿಯ ಕುರಿತು ಕೆಟ್ಟ ಮಾತುಗಳನ್ನು ಆಡಿದ್ದಾರೆ. ಆದರೆ, ಪ್ರಧಾನಿ ತಾಯಿ ಅವರ ಕುರಿತು ನಿಂದಿಸದಂತೆ ಆರ್‌ಜೆಡಿ ನಾಯಕರು ತಮ್ಮ ಕಾರ್ಯಕರ್ತರಿಗೆ ಸೂಚಿಸಲೂ ಇಲ್ಲ’ ಎಂದೂ ಬಿಜೆಪಿ ಹೇಳಿದೆ. ಈ ಸಂಬಂಧ ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ‘ಎಕ್ಸ್’ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊವು ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡುತ್ತಿದೆ. ಪಿಟಿಐ ಸುದ್ದಿ ಸಂಸ್ಥೆಯು ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿಲ್ಲ. ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯೆ ಪಡೆಯಲು ಆರ್‌ಜೆಡಿ ನಾಯಕರನ್ನು ಪದೇ ಪದೇ ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಪಿಟಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.