ADVERTISEMENT

ತೇಜಸ್ವಿಯನ್ನು ಕೊಲ್ಲಲು ಜೆಡಿಯು–ಬಿಜೆಪಿ ಸಂಚು: ರಾಬ್ಡಿ ದೇವಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 13:04 IST
Last Updated 25 ಜುಲೈ 2025, 13:04 IST
   

ಪಟ್ನಾ: ತಮ್ಮ ಮಗ ತೇಜಸ್ವಿ ಯಾದವ್ ಅವರನ್ನು ಕೊಲೆ ಮಾಡಲು ಆಡಳಿತಾರೂಢ ಜೆಡಿಯು-ಬಿಜೆಪಿ ಮೈತ್ರಿಕೂಟ ಪಿತೂರಿ ನಡೆಸಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಶುಕ್ರವಾರ ಆರೋಪಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ, ಈ ಹಿಂದೆ ಯುವ ನಾಯಕನ ಮೇಲೆ ಕನಿಷ್ಠ ಮೂರ್ನಾಲ್ಕು ಬಾರಿ ಹತ್ಯೆಗೆ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದಾರೆ.

ತೇಜಸ್ವಿ ಅವರನ್ನು ಕೊಲೆ ಮಾಡಲು ಪ್ರಯತ್ನ ನಡೆಯುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪೈಪೋಟಿಯೇ ಇಲ್ಲದಂತೆ ಮಾಡಲು ಹತ್ಯೆಗೆ ಜೆಡಿಯು, ಬಿಜೆಪಿ ಸಂಚು ರೂಪಿಸಿವೆ. ಮೂರ್ನಾಲ್ಕು ಬಾರಿ ಹತ್ಯೆ ಯತ್ನ ನಡೆದಿದೆ. ಒಮ್ಮೆ ಅವರ ಕಾರಿನ ಮೇಲೆ ಟ್ರಕ್ ಹರಿಸುವ ಯತ್ನ ನಡೆದಿತ್ತು ಎಂದೂ ಆರೋಪಿಸಿದ್ದಾರೆ.

ADVERTISEMENT

ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಬಣದ ನೇತೃತ್ವ ವಹಿಸುವ ಸಾಧ್ಯತೆ ಇದೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿಸಿ ವಿಪಕ್ಷಗಳು ಕಪ್ಪು ಬಟ್ಟೆ ಧರಿಸಿ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದಕ್ಕೆ ಸಿಎಂ ನಿತೀಶ್ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ರಾಬ್ಡಿ ದೇವಿ, ಗೂಳಿ ಕೆಂಪು ವಸ್ತ್ರ ಕಂಡು ಉದ್ರೇಕಗೊಳ್ಳುವ ರೀತಿ ನಿತೀಶ್ ಕಪ್ಪು ವಸ್ತ್ರ ಕಂಡು ವಿಚಲಿತರಾದಂತೆ ಕಾಣುತ್ತಿದೆ. ನಾವು ಯಾವುದೇ ಕೆಟ್ಟ ನಡವಳಿಕೆ ತೋರಿಲ್ಲ ಎಂದಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಇಂದು ಬೆಳಿಗ್ಗೆ ವಿಧಾನಪರಿಷತ್ ದ್ವಾರದ ಬಳಿ ರಾಬ್ಡಿದೇವಿ ಇತರ ಸದಸ್ಯರ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.