ADVERTISEMENT

ಕೊಟ್ಟ ಭರವಸೆ ಈಡೇರದಿದ್ದರೆ ಚಪ್ಪಲಿಯಿಂದಲೇ ಹೊಡೆಯಿರಿ

ಮತದಾರರಿಗೆ ಚಪ್ಪಲಿ ಹಂಚಿ ಸುದ್ದಿಯಾದ ತೆಲಂಗಾಣದ ಪಕ್ಷೇತರ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 10:54 IST
Last Updated 23 ನವೆಂಬರ್ 2018, 10:54 IST
   

ಹೈದರಾಬಾದ್: ತೆಲಂಗಾಣದ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಜಿದ್ದಾಜಿದ್ದಿ ಕಣದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಬಗೆಬಗೆ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಮತದಾರರಿಗೆ ಚಪ್ಪಲಿಗಳನ್ನು ಕೊಡುವ ಮೂಲಕ ಅಭ್ಯರ್ಥಿಯೊಬ್ಬರುಎಲ್ಲರ ಗಮನ ಸೆಳೆದಿದ್ದಾರೆ.

ತೆಲಂಗಾಣದಲ್ಲಿ ಡಿ.7ಕ್ಕೆ ಮತದಾನ ನಡೆಯಲಿದೆ. ಜಗತಿಯಾಲ್ ಜಿಲ್ಲೆ ಕೊರುಟಾಲವಿಧಾನಸಭೆ ಕ್ಷೇತ್ರದ ಅಕುಲ ಹನುಮಂತ ಮತದಾರರನ್ನು ಒಲಿಸಿಕೊಳ್ಳಲು ವಿಶಿಷ್ಟ ತಂತ್ರ ಅನುಸರಿಸುತ್ತಿದ್ದಾರೆ. ಮನೆಮನೆ ಪ್ರಚಾರಕ್ಕೆ ಹೋಗುವಾಗ ತಮ್ಮ ಜೊತೆಗೆ ಒಂದಿಷ್ಟು ಚಪ್ಪಲಿಗಳನ್ನೂ ತೆಗೆದುಕೊಂಡು ಹೋಗುತ್ತಿದ್ದಾರೆ. ಚಪ್ಪಲಿಗಳನ್ನು ಮತದಾರರಿಗೆ ಕೊಟ್ಟು 'ನಾನು ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಇದರಿಂದಲೇ ನನಗೆ ಹೊಡೆಯಿರಿ' ಎಂದು ಹೇಳುತ್ತಿದ್ದಾರೆ.

ಮುಂದಿನ ದಿನಾಂಕ ಹಾಕಿದ ರಾಜೀನಾಮೆ ಪತ್ರವನ್ನೂ ಎಲ್ಲರ ಎದುರು ಪ್ರದರ್ಶಿಸುತ್ತಿದ್ದಾರೆ. ಒಂದು ವೇಳೆ ನಾನು ಗೆದ್ದ ನಂತರ ಏನೂ ಕೆಲಸ ಮಾಡದಿದ್ದರೆ, ನಿಮಗೆ ಅಸಮಾಧಾನವಾದರೆ ನನ್ನನ್ನು ಕೆಳಗಿಳಿಸಬಹುದು ಎಂದು ವಾಗ್ದಾನ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೋಟೊಗಳಲ್ಲಿ ಮಹಿಳೆಯೊಬ್ಬರು ಕೈಲಿ ಚಪ್ಪಲಿ ಹಿಡಿದು, ಅದನ್ನು ಕೊಟ್ಟ ಅಭ್ಯರ್ಥಿಯ ಜೊತೆಗೆ ನಗುತ್ತಾ ಮತನಾಡುತ್ತಿರುವುದು ಎದ್ದು ಕಾಣುತ್ತದೆ. ಹಿನ್ನೆಲೆಯಲ್ಲಿರುವ ವ್ಯಕ್ತಿಯೊಬ್ಬ ಚಪ್ಪಲಿಗಳೇ ತುಂಬಿರುವ ವ್ಯಂಗ್ಯಚಿತ್ರವೊಂದನ್ನು ಪ್ರದರ್ಶಿಸುತ್ತಿದ್ದಾನೆ.

ADVERTISEMENT

ಕೊರುಟಾಲ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿರುವಟಿಆರ್‌ಎಸ್‌ನ ಕೆ.ವಿದ್ಯಾಸಾಗರ್‌ ರಾವ್ ಅವರ ಎದುರುಅಕುಲ ಹನುಮಂತಪ್ಪ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.