ADVERTISEMENT

ನವದೆಹಲಿಯಲ್ಲಿ ರೈತರ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ: ಇಲ್ಲಿವೆ ಪ್ರಮುಖಾಂಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 2:00 IST
Last Updated 26 ಜನವರಿ 2021, 2:00 IST
ಪಂಜಾಬ್‌ನಿಂದ ದೆಹಲಿಯತ್ತ ಹೊರಟ ರೈತರು: ಪಿಟಿಐ ಚಿತ್ರ
ಪಂಜಾಬ್‌ನಿಂದ ದೆಹಲಿಯತ್ತ ಹೊರಟ ರೈತರು: ಪಿಟಿಐ ಚಿತ್ರ   

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ 72ನೇ ಗಣರಾಜ್ಯೋತ್ಸವದ ನಡುವೆ ರೈತರ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಯಲಿದೆ. ಈ ಮಧ್ಯೆ, ರ್‍ಯಾಲಿಯಲ್ಲಿ ಭಾಗವಹಿಸುವ ಪ್ರಮುಖ ರೈತ ಸಂಘಟನೆಗಳಲ್ಲೊಂದಾದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯು,ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಪೊಲೀಸರು ಒಪ್ಪಿದ ಮಾರ್ಗದಲ್ಲಿ ರ್‍ಯಾಲಿ ನಡೆಸುವುದಿಲ್ಲ. ಬದಲಾಗಿ ದೆಹಲಿಯ ಔಟರ್ ರಿಂಗ್ ರಸ್ತೆಯಲ್ಲಿ ನಡೆಸುವುದಾಗಿ ಘೋಷಿಸಿದ್ದು, ಪೊಲೀಸರು ಮತ್ತು ರೈತರ ನಡುವೆ ಸಂಘರ್ಷದ ಸೂಚನೆ ನೀಡಿದೆ. ಫೆಬ್ರವರಿ 1 ರ ಬಜೆಟ್ ದಿನದಂದು ರೈತರು ಸಂಸತ್ತಿಗೆ ಕಾಲು ಮೆರವಣಿಗೆ ನಡೆಸಲು ಯೋಜಿಸುತ್ತಿದ್ದಾರೆ. ರೈತರ ಪ್ರತಿಭಟನೆ ಸರಿ ಸುಮಾರು ಎರಡು ತಿಂಗಳು ಮುಗಿಸಿದ್ದು, ಫೆಬ್ರುವರಿ 1ರ ಬಜೆಟ್ ದಿನದಂದು ಸಂಸತ್ ಭವನದವರೆಗೆ ಪಾದಯಾತ್ರೆ ಸಹ ನಡೆಸಲಿದ್ದಾರೆ.

ರೈತರ ಟ್ರ್ಯಾಕ್ಟರ್ ರ್‍ಯಾಲಿ ಕುರಿತಾದ ಪ್ರಮುಖ ಅಂಶಗಳು

1. ರೈತರ ರ್‍ಯಾಲಿಯ ಲಾಭ ಪಡೆದು ದೇಶ ವಿರೋಧಿಗಳು ದುಷ್ಕ್ಋತ್ಯಕ್ಕೆ ಪ್ರಚೋದನೆ ನೀಡುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸ್ ಮುಖ್ಯಸ್ಥ ಎಸ್‌ಎನ್. ಶ್ರೀವಾಸ್ತವ್ ತಿಳಿಸಿದ್ದಾರೆ. ಇತ್ತೀಚೆಗೆ, ರೈತರ ಮೇಲೆ ಗುಂಡಿನ ದಾಳಿ ನಡೆಸಿ ರ್‍ಯಾಲಿಗೆ ಅಡ್ಡಿಮಾಡುವ ಸಂಚಿನಲ್ಲಿದ್ದ ಆರೋಪದ ಮೇಲೆ ಸಿಂಘು ಗಡಿಯಲ್ಲಿ ರೈತರೇ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು.

ADVERTISEMENT

2. ದೆಹಲಿಯಾದ್ಯಂತ ಭಾರೀ ಭದ್ರತೆ ಮಾಡಲಾಗಿದ್ದು, ರಾಜ್‌ಪತ್‌ನಲ್ಲಿ ಸಶಸ್ತ್ರ ಪಡೆಗಳ ಸಾಂಪ್ರದಾಯಿಕ ಪರೇಡ್ ಬಳಿಕ ರ್‍ಯಾಲಿ ಆರಂಭವಾಗಲಿದೆ. ಇದು ದೆಹಲಿಯ ಮೂರು ಭಾಗಗಳಲ್ಲಿ ರಿಂಗ್ ರಸ್ತೆಯ ಉದ್ದಕ್ಕೂ ನಡೆಯಲಿದೆ. ಗಣರಾಜ್ಯೋತ್ಸವದ ಮೆರವಣಿಗೆ ಮುಗಿಯುವ ಮೊದಲು ರ್‍ಯಾಲಿ ದೆಹಲಿಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

3. ಪೊಲೀಸರು ದೆಹಲಿಯ ವಿವರವಾದ ಸಂಚಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ 44, ಸಿಂಗು ಮತ್ತು ಟಿಕ್ರಿ ಗಡಿ ಪ್ರದೇಶಗಳ ರಸ್ತೆಗಳಿಗೆ ಹೋಗದಂತೆ ವಾಹನ ಚಾಲಕರಿಗೆ ಸ;ಹೆ ನೀಡಿದೆ. ಜೊತೆಗೆ, ಜಾಜಿಪುರ್ ಗಡಿ, ಅಪ್ಸರಾ ಬಾರ್ಡರ್ ಮತ್ತು ರಾಷ್ಟ್ರೀಯ ಹೆದ್ದಾರಿ 24 ಅನ್ನು ಸಂಪರ್ಕಿಸುವ ರಸ್ತೆಗಳನ್ನು ತಪ್ಪಿಸುವಂತೆ ಮನವಿ ಮಾಡಲಾಗಿದೆ.

4. ರೈತರ ಟ್ರ್ಯಾಕ್ಟರ್‌ ರ್‍ಯಾಲಿಗೆ ದೆಹಲಿ ಪೊಲೀಸರು 37 ಷರತ್ತುಗಳನ್ನು ಒಡ್ಡಿದ್ದಾರೆ. ರ್‍ಯಾಲಿಯಲ್ಲಿ ಐದು ಸಾವಿರ ಜನರು ಮತ್ತು ಐದು ಸಾವಿರ ಟ್ರ್ಯಾಕ್ಟರ್‌ ಮಾತ್ರ ಭಾಗವಹಿಸಬಹುದು. ರ್‍ಯಾಲಿಯು ಸಂಜೆ ಐದು ಗಂಟೆಗೆ ಕೊನೆಗೊಳ್ಳಬೇಕು ಎಂಬ ಷರತ್ತುಗಳು ಅದರಲ್ಲಿ ಸೇರಿವೆ.

5. ಪೊಲೀಸರು ಅನುಮತಿ ನೀಡಿರುವ ಮೂರು ಮಾರ್ಗಗಳಲ್ಲಿ 2,500 ಸ್ವಯಂಸೇವಕರನ್ನು ಸಂಘಟಕರೇ ನಿಯೋಜಿಸಬೇಕು.

6. ರ್‍ಯಾಲಿಗೆ ಕೇಂದ್ರದ ಆಕ್ಷೇಪಣೆಯ ಹೊರತಾಗಿಯೂ ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದೆ ಎಂದು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ವಹಿಸಿದ ಬಳಿಕ ರ್‍ಯಾಲಿ ನಡೆಯುತ್ತಿದೆ. ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ನಿಲ್ಲಿಸಲು ನ್ಯಾಯಾಲಯ ಈ ಹಿಂದೆ ನಿರಾಕರಿಸಿದ್ದು, ಶಾಂತಿಯುತ ಪ್ರತಿಭಟನೆ ಮೂಲಭೂತ ಹಕ್ಕು ಎಂದು ಸೂಚಿಸಿತ್ತು.

7. ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ 11 ಸುತ್ತಿನ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ವಿಶೇಷ ಸಮಿತಿಯು 18 ತಿಂಗಳು ಕೃಷಿ ಕಾಯ್ದೆಗಳನ್ನು ನಿಲ್ಲಿಸುವ ಪ್ರಸ್ತಾಪವನ್ನೂ ರೈತರು ತಿರಸ್ಕರಿಸಿದ್ದಾರೆ.
ಈ ಮಧ್ಯೆ, ಕೃಷಿ ಸಚಿವ ನರೇಂದ್ರ ತೋಮರ್, "ಸರ್ಕಾರವು ರೈತರ ಸಂಘಗಳಿಗೆ ಉತ್ತಮ ಕೊಡುಗೆ ನೀಡಿದೆ" ಎಂದು ಹೇಳಿದ್ದಾರೆ.

8. ಹೊಸ ಕೃಷಿ ಕಾಯ್ದೆಗಳು ತಮ್ಮ ಆದಾಯವನ್ನು ಕುಗ್ಗಿಸುತ್ತವೆ ಮತ್ತು ಕಾರ್ಪೊರೇಟ್‌ಗಳ ಕರುಣೆಯಲ್ಲಿ ಬದುಕುವಂತೆ ಮಾಡುವಂತೆ ಎನ್ನುತ್ತಿರುವ ರೈತರು ಈ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಕಾನೂನುಗಳನ್ನು ರದ್ದುಗೊಳಿಸುವ ಮಾತೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ, ಅವು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಯಾಗಿವೆ. ಬೆಂಬಲ ಬೆಲೆಗಳಿಗೆ ಲಿಖಿತ ಗ್ಯಾರಂಟಿ ಮಾತ್ರ ನೀಡುವ ಭರವಸೆ ನೀಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.