ADVERTISEMENT

ಭಯೋತ್ಪಾದನೆ ಚಟುವಟಿಕೆ ಪಾಕ್‌ನ ಯುದ್ಧ ತಂತ್ರ: ಪ್ರಧಾನಿ ಮೋದಿ

ಅಡ್ಡದಾರಿಯ ಮೂಲಕ ಪಾಕಿಸ್ತಾನ ಯುದ್ಧ ಮಾಡುವ ಕಾರ್ಯವಿಧಾನಕ್ಕೆ ಜೋತು ಬಿದ್ದಿದೆ: ಪ್ರಧಾನಿ

ಪಿಟಿಐ
Published 27 ಮೇ 2025, 13:44 IST
Last Updated 27 ಮೇ 2025, 13:44 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಗಾಂಧಿನಗರ: ‘ಪಾಕಿಸ್ತಾನವು ಉತ್ತೇಜನ ನೀಡುತ್ತಿರುವ ಭಯೋತ್ಪಾದನೆಯ ಚಟುವಟಿಕೆಗಳು ಉದ್ದೇಶಪೂರ್ವಕವಾಗಿ ಯುದ್ಧ ಕಾರ್ಯತಂತ್ರವಾಗಿದ್ದು, ಇದಕ್ಕೆ ಭಾರತ ಸೂಕ್ತವಾದ ಪ್ರತ್ಯುತ್ತರವನ್ನು ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಪಾಕಿಸ್ತಾನವು ಭಯೋತ್ಪಾದಕತೆಯ ಮೂಲಕ ಯುದ್ಧದಲ್ಲಿ ತೊಡಗಿದೆ’ ಎಂದು ನೇರವಾಗಿ ಆರೋಪಿಸಿದರು. ಮಂಗಳವಾರ ಇಲ್ಲಿ ನಡೆದ ಗುಜರಾತ್‌ ಸರ್ಕಾರದ ನಗರಾಭಿವೃದ್ಧಿ ಕುರಿತ ಕಾರ್ಯಕ್ರಮದಲ್ಲಿ ಅವರು ‘ಆಪರೇಷನ್‌ ಸಿಂಧೂರ’ ಉಲ್ಲೇಖಿಸಿ ಈ ಮಾತು ಹೇಳಿದರು.

‘ಮೇ 6ರಂದು ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಸತ್ತವರಿಗೆ ಸರ್ಕಾರಿ ಗೌರವ ನೀಡಲಾಗಿದೆ. ಶವಪೆಟ್ಟಿಗೆಗೆ ಪಾಕ್‌ ಧ್ವಜ ಹೊದಿಸಿದ್ದು, ಸೇನೆ ಗೌರವ ಸಲ್ಲಿಸಿದೆ. ಹೀಗಾಗಿ, ‘ಆಪರೇಷನ್‌ ಸಿಂಧೂರ’ವನ್ನು ಭಯೋತ್ಪಾದನೆ ವಿರುದ್ಧದ ಯುದ್ಧವಷ್ಟೇ ಎನ್ನಲಾಗದು’ ಎಂದು ಹೇಳಿದರು.  

ADVERTISEMENT

‘ಭಯೋತ್ಪಾದನೆ ಚಟುವಟಿಕೆಗಳು ಯುದ್ಧಕ್ಕೆ ಪರ್ಯಾಯವಾಗಿ ಪಾಕ್‌ ನಿರ್ದಿಷ್ಟವಾಗಿ ನಡೆಸುತ್ತಿರುವ ಕಾರ್ಯತಂತ್ರ ಎಂಬುದನ್ನು ಈ ಬೆಳವಣಿಗೆ ದೃಢಪಡಿಸಿದೆ. ಪಾಕ್‌ ಇಂತಹ ಯುದ್ಧದಲ್ಲಿ ತೊಡಗಿದರೆ ಭಾರತವೂ ಪ್ರತ್ಯುತ್ತರ ನೀಡಲಿದೆ’ ಎಂದು ಘೋಷಿಸಿದರು.

ಭಾರತ–ಪಾಕಿಸ್ತಾನದ ನಡುವೆ ಯುದ್ಧ ನಡೆದಾಗಲೆಲ್ಲ ಭಾರತೀಯ ಸೇನೆಯು ಹಿಮ್ಮೆಟ್ಟಿಸಿದೆ ಎಂಬುದನ್ನುನೆರೆಯ ರಾಷ್ಟ್ರ ಮರೆಯದು. ಇದೇ ಕಾರಣಕ್ಕೆ ಪಾಕ್ ನೇರವಾಗಿ ಯುದ್ಧ ನಡೆಸದೇ ಅಡ್ಡದಾರಿಯ ಮೂಲಕ ಯುದ್ಧದಲ್ಲಿ ತೊಡಗಿದೆ ಎಂದು ಆರೋಪಿಸಿದರು.

‘ದೇಹ ಎಷ್ಟೇ ಗಟ್ಟಿಮುಟ್ಟಾಗಿರಲಿ. ಸಣ್ಣ ಮುಳ್ಳು ಕೂಡ ನೋವು ಉಂಟು ಮಾಡಲಿದೆ. ಹೀಗಾಗಿ, ನಾವು ಮುಳ್ಳನ್ನೇ ತೆಗೆಯಲು ತೀರ್ಮಾನಿಸಿದ್ದೇವೆ ಎಂದು ಮೋದಿ ಹೇಳಿದರು. 

ದೇಶ ವಿಭಜನೆಯಾದ ಬಳಿಕ ಮೊದಲ ದಿನ ರಾತ್ರಿಯಂದೇ ಕಾಶ್ಮೀರದ ಮೇಲೆ ಮುಜಾಹಿದ್ದೀನ್‌ ದಾಳಿ ನಡೆಸಿತ್ತು. ಅದರ ಹಿಂದೆಯೇ ಪಾಕಿಸ್ತಾನ ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡಿತು. ಒಂದು ವೇಳೆ ಅಂದೇ ಮುಜಾಹಿದ್ದೀನ್‌ ಅನ್ನು ಇಲ್ಲವಾಗಿಸಿದ್ದರೆ, ಸರ್ದಾರ್ ಪಟೇಲ್‌ ಅವರ ಸಲಹೆಯನ್ನು ಪರಿಗಣಿಸಿದ್ದರೆ, ಕಳೆದ 75 ವರ್ಷಗಳಲ್ಲಿ ನಾವು ನೋಡಿದ ಸರಣಿ ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇರಲಿಲ್ಲ ಎಂದು ಪ್ರಧಾನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.