ADVERTISEMENT

ಶ್ರೀನಗರ ಗ್ರೆನೆಡ್‌ ದಾಳಿಯ ಭಯೋತ್ಪಾದಕರ ಗುರುತು ಪತ್ತೆ: ಡಿಜಿಪಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 15:10 IST
Last Updated 8 ಮಾರ್ಚ್ 2022, 15:10 IST

ಜಮ್ಮು: ‘ಶ್ರೀನಗರದ ಹರಿಸಿಂಗ್‌ ಹೈ ಸ್ಟ್ರೀಟ್‌ನಲ್ಲಿ ಇತ್ತೀಚೆಗೆ ನಡೆದ ಗ್ರೆನೆಡ್‌ ದಾಳಿಯ ಹೊಣೆಹೊತ್ತ ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್‌ ಸಿಂಗ್‌ ಹೇಳಿದರು.

ಇಲ್ಲಿನ ಕತುವಾ ಜಿಲ್ಲೆಯಲ್ಲಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಂತಿಯ ಶತ್ರುಗಳು ಇಂತಹ ಹೇಡಿತನದ ಕೃತ್ಯ ಎಸಗುತ್ತಿದ್ದಾರೆ. ಉಗ್ರರ ದುಷ್ಕೃತ್ಯದ ಯತ್ನವನ್ನು ನಾವು ಈಗಾಗಲೇ ವಿಫಲಗೊಳಿಸಿದ್ದೇವೆ. ಮುನ್ನೆಲೆಗೆ ಬರಲು ಯತ್ನಿಸುವ ಯಾವುದೇ ಹೊಸ ಭಯೋತ್ಪಾದಕ ಸಂಘಟನೆಯನ್ನು ತಟಸ್ಥಗೊಳಿಸಿದ್ದೇವೆ. ಕಣಿವೆಯಲ್ಲಿ ಮಾದಕದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಭದ್ರತೆಯನ್ನು ಬಲಪಡಿಸಿದ್ದು, ಪಾಕಿಸ್ತಾನದ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.

ಶ್ರೀನಗರದ ಹರಿಸಿಂಗ್‌ ಹೈ ಸ್ಟ್ರೀಟ್‌ನಲ್ಲಿ ಭಾನುವಾರ (ಮಾ.6) ನಡೆದ ಉಗ್ರರ ನಡೆಸಿದ ಗ್ರೆನೆಡ್‌ ದಾಳಿಯಲ್ಲಿ ಯುವತಿಯೊಬ್ಬರು ಸೇರಿ ಇಬ್ಬರು ಮೃತಪಟ್ಟಿದ್ದು, 34 ಮಂದಿ ಗಾಯಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.