ADVERTISEMENT

ನಿಯೋಗದ ಭಾಗವಾಗಿ ತರೂರ್‌ ಸಮರ್ಥನೆ: ಚವಾಣ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 16:00 IST
Last Updated 2 ಜುಲೈ 2025, 16:00 IST
ಪೃಥ್ವಿರಾಜ್ ಚವಾಣ್
ಪೃಥ್ವಿರಾಜ್ ಚವಾಣ್   

ನವದೆಹಲಿ (ಪಿಟಿಐ): ‘ವಿದೇಶಕ್ಕೆ ಕಳುಹಿಸಲಾದ ಸರ್ಕಾರಿ ನಿಯೋಗದ ಭಾಗವಾಗಿದ್ದ ಸಂಸದ ಶಶಿ ತರೂರ್‌ ಅವರು, ನಿಯೋಗದ ಸದಸ್ಯರಾಗಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲೇಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪೃಥ್ವಿರಾಜ್‌ ಚವಾಣ್‌ ಬುಧವಾರ ಹೇಳಿದರು.

ಈ ಕುರಿತು ಪಿಟಿಐ ಜತೆ ಮಾತನಾಡಿದ ಅವರು, ‘ಶಶಿ ತರೂರ್‌ ಅವರ ಭವಿಷ್ಯ ಏನಾಗಲಿದೆ’ ಎಂಬ ಪ್ರಶ್ನೆಗೆ ‘ನನಗೆ ತಿಳಿದಿಲ್ಲ ಮತ್ತು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು. 

ಪಹಲ್ಗಾಮ್‌ ದಾಳಿ ಮತ್ತು ಆ ಬಳಿಕ ನಡೆದ ‘ಆಪರೇಷನ್‌ ಸಿಂಧೂರ್‌’, ಭಾರತ– ಪಾಕಿಸ್ತಾನ ಸಂಘರ್ಷದ ವಿಚಾರದಲ್ಲಿ ತರೂರ್‌ ಅವರು ಭಾರತ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಕಾಂಗ್ರೆಸ್‌ ನಿಲುವಿಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದರು. ಇದು ಕಾಂಗ್ರೆಸ್‌ನ ಕೆಲ ನಾಯಕರನ್ನು ಕೆರಳುವಂತೆ ಮಾಡಿತ್ತು.   

ADVERTISEMENT

‘ಸರ್ಕಾರವನ್ನು ಸಮರ್ಥಿಸಿಕೊಳ್ಳುವುದು ನಿಯೋಗದ ಸದಸ್ಯರ ಕೆಲಸವಾಗಿರುತ್ತದೆಯೇ ಹೊರತು, ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪ್ರದರ್ಶಿಸುವುದಲ್ಲ’ ಎಂದು ಚವಾಣ್‌ ಅವರು ಪ್ರತಿಕ್ರಿಯಿಸಿದರು.

‘ಆಪರೇಷನ್‌ ಸಿಂಧೂರ್‌’ ಬಳಿಕ ಭಾರತದ ನಿಲುವನ್ನು ತಿಳಿಸಲು ಅಮೆರಿಕ ಮತ್ತು ಇತರ ನಾಲ್ಕು ದೇಶಗಳಿಗೆ ಕಳುಹಿಸಿದ್ದ ಬಹುಪಕ್ಷಗಳ ಸಂಸದರ ನಿಯೋಗದ ನೇತೃತ್ವವನ್ನು ತರೂರ್‌ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.