ADVERTISEMENT

‘ಠಾಣೆಗಳಲ್ಲಿ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ’: ಸಿಜೆ ಎನ್‌.ವಿ ರಮಣ ಕಳವಳ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎನ್‌.ವಿ. ರಮಣ ಕಳವಳ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 13:34 IST
Last Updated 8 ಆಗಸ್ಟ್ 2021, 13:34 IST
   

ನವದೆಹಲಿ: ‘ಪೊಲೀಸ್‌ ಠಾಣೆಗಳಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ವಿಶೇಷ ಅಧಿಕಾರ ಹೊಂದಿರುವವರು ಸಹ ಇದರಿಂದ ಹೊರತಾಗಿಲ್ಲ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎನ್‌.ವಿ. ರಮಣ ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ಆ್ಯಪ್‌ ಅನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕಸ್ಟಡಿಯಲ್ಲಿದ್ದಾಗ ಹಿಂಸೆ ನೀಡುವುದು ಮತ್ತು ಪೊಲೀಸ್‌ ದೌರ್ಜನ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಮುಂದುವರಿದಿವೆ’ ಎಂದು ಹೇಳಿದರು.

‘ವಿಶೇಷ ಅಧಿಕಾರ ಹೊಂದಿರುವವರಿಗೂ ಥರ್ಡ್‌ ಡಿಗ್ರಿಟ್ರೀಟ್‍ಮೆಂಟ್ ನೀಡಲಾಗುತ್ತಿದೆ. ಆದ್ದರಿಂದ, ದೌರ್ಜನ್ಯಗಳನ್ನು ತಡೆಯುವ ಕುರಿತು ದೇಶದಾದ್ಯಂತ ಪೊಲೀಸ್‌ ಅಧಿಕಾರಿಗಳಿಗೂ ಎನ್‌ಎಎಲ್‌ಎಸ್‌ಎ ತರಬೇತಿ ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪೊಲೀಸ್‌ ದೌರ್ಜನ್ಯಗಳನ್ನು ನಿಯಂತ್ರಿಸಲು ಕಾನೂನಿನ ನೆರವು ಪಡೆಯುವ ಸಾಂವಿಧಾನಿಕ ಹಕ್ಕು ಮತ್ತು ಉಚಿತ ಕಾನೂನು ಸೇವೆಗಳ ಲಭ್ಯತೆಯ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಪೊಲೀಸ್‌ ಠಾಣೆ ಮತ್ತು ಕಾರಾಗೃಹದಲ್ಲಿ ಕಾನೂನು ನೆರವು ನೀಡುವ ಕುರಿತು ಫಲಕಗಳನ್ನು ಅಳವಡಿಸಬೇಕು’ ಎಂದು ಸಲಹೆ ನೀಡಿದರು.

‘ಎಲ್ಲ ವರ್ಗದವರಿಗೂ ಒಂದೇ ರೀತಿಯಲ್ಲಿ ನ್ಯಾಯ ದೊರೆಯಬೇಕು. ಆಗ ಮಾತ್ರ ಕಾನೂನಿನ ಅನ್ವಯ ಆಡಳಿತ ನಡೆಸಲು ಸಾಧ್ಯ. ಆದರೆ, ಗ್ರಾಮೀಣ ಮತ್ತು ದುರ್ಗಮ ಸ್ಥಳಗಳಲ್ಲಿರುವವರಿಗೆ ನ್ಯಾಯಾಂಗದ ವ್ಯವಸ್ಥೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಈಗಿರುವ ಕೊರತೆಗಳನ್ನು ನೀಗಿಸುವ ಕಾರ್ಯ ನಡೆಯಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.