ಶ್ರೀನಗರ: ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಹಿಜಬುಲ್ ಮುಜಾಯಿದ್ದಿನ್ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ.
ಈ ಭಾಗದಲ್ಲಿ ಉಗ್ರರು ಅಡಗಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮಂಗಳವಾರ ರಾತ್ರಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ಈ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯ ಕೈಗೊಂಡರು. ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳು ಉಗ್ರರ ಅಡಗು ಪ್ರದೇಶವನ್ನು ಸುತ್ತುವರೆಯುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ಪ್ರಾರಂಭಿಸಿದರು. ಬುಧವಾರ ಬೆಳಿಗ್ಗೆ ಸುಮಾರಿಗೆ ಮೂವರು ಉಗ್ರರನ್ನು ಹತ್ಯೆ ಮಾಡಲಾಯಿತು.
‘ಹತ್ಯೆ ಆದವರನ್ನು ಜಹಂಗೀರ್ ವಾನಿ ಅಲಿಯಾಸ್ ಉಮರ್ ಮುಕ್ತಾರ್, ರಾಜ ಉಮೆರ್ ಮಕ್ಬೂಲ್ ಭಟ್ ಮತ್ತು ಉಜೈರ್ ಅಹಮದ್ ಭಟ್ ಎಂದು ಗುರುತಿಸಲಾಗಿದೆ. ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್‌ಭಾಗ್ ಸಿಂಗ್ ಮಾಹಿತಿ ನೀಡಿದರು.
‘ಜಹಂಗೀರ್ ವಾನಿಯು ಹಿಜಬ್ ಉಗ್ರ ಸಂಘಟನೆಯ ಎರಡನೇ ಮುಖ್ಯ ನಾಯಕನಾಗಿದ್ದ. ಇಬ್ಬರು ನಾಗರಿಕರ ಹತ್ಯೆಯಲ್ಲಿ ಈತನ ಕೈವಾಡವಿದೆ. 370ನೇ ವಿಧಿ ರದ್ದತಿಯ ನಂತರ ನಡೆದ ಟ್ರಾಲ್‌ನಲ್ಲಿ ಮಸೀದಿಯಲ್ಲಿ ನಡೆದ ಹಿಂಸಾಚಾರ ಮತ್ತು ಇತರ ಕೃತ್ಯಗಳಲ್ಲೂ ಈತ ಭಾಗಿಯಾಗಿದ್ದಾನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.