ADVERTISEMENT

ಸಾಲದ ಕಂತಿಗೆ 3 ತಿಂಗಳು ಬಿಡುವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 20:30 IST
Last Updated 27 ಮಾರ್ಚ್ 2020, 20:30 IST
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್    

ಮುಂಬೈ (ಪಿಟಿಐ): ‘ಕೊರೊನಾ–2’ ವೈರಸ್‌ ಬಿರುಗಾಳಿಗೆ ಸಿಲುಕಿರುವ ದೇಶಿ ಆರ್ಥಿಕತೆಯ ರಕ್ಷಣೆಗೆ ಮುಂದಾಗಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌, ಹಣ ಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿಸಲು ಮತ್ತು ಸ್ಥಿರತೆ ಮೂಡಿಸಲು ಸರಣಿ ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ.

ಕೇಂದ್ರ ಸರ್ಕಾರವು ₹1.70 ಲಕ್ಷ ಕೋಟಿ ಮೊತ್ತದ ಪರಿಹಾರ ಕೊಡುಗೆ ಪ್ರಕಟಿಸಿದ ಮರು ದಿನವೇ ಕೇಂದ್ರೀಯ ಬ್ಯಾಂಕ್‌, ವಿವಿಧ ಬಗೆಯ ಸಾಲಗಾರರಿಗೆ ನೆಮ್ಮದಿ ನೀಡುವ, ಹಣಕಾಸು ವ್ಯವಸ್ಥೆಯಲ್ಲಿ ಸ್ಥಿರತೆ ಮೂಡಿಸುವ ಕ್ರಮಗಳನ್ನು ಘೋಷಿಸಿದೆ.ಗೃಹ, ವಾಹನ, ಶಿಕ್ಷಣ, ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ಅವಧಿ ಸಾಲಗಳ ಮರುಪಾವತಿಗೆ ಮೂರು ತಿಂಗಳ ಬಿಡುವು ಘೋಷಿಸಿದೆ. ಈ ವರ್ಷದ ಮಾರ್ಚ್ 1ಕ್ಕೆ ಅನ್ವಯಿಸುವಂತೆ ಎಲ್ಲ ಸಾಲಗಳಿಗೂ ಇದು ಅನ್ವಯವಾಗಲಿದೆ.

ಸಾಲ ನೀಡಿರುವ ಎಲ್ಲ ಬಗೆಯ ಹಣಕಾಸು ಸಂಸ್ಥೆಗಳು ಮೂರು ತಿಂಗಳ ವಿನಾಯ್ತಿ ನೀಡಬೇಕು. ದುಡಿಯುವ ಬಂಡವಾಳದ ಬಡ್ಡಿ ಪಾವತಿಸಲು 3 ತಿಂಗಳ ಕಾಲಾವಕಾಶ ನೀಡಬೇಕು. ಮುಂದೂಡಿರುವ ಸಾಲ ಮತ್ತು ಬಡ್ಡಿ ಪಾವತಿಯನ್ನು ಸುಸ್ತಿ ಎಂದು ವರ್ಗೀಕರಿಸಬಾರದು. ಇದು ಸಾಲಗಾರರ ಕ್ರೆಡಿಟ್‌ ಸ್ಕೋರ್‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂದೂ ಹೇಳಿದೆ.

ADVERTISEMENT

ಸಿಆರ್‌ಆರ್‌ ಪ್ರಮಾಣ ಇಳಿಕೆ: ಬ್ಯಾಂಕ್‌ಗಳು ತಮ್ಮ ಠೇವಣಿಯ ಕೆಲ ಭಾಗವನ್ನು ನಗದು ಮೀಸಲು ಅನುಪಾತ ರೂಪದಲ್ಲಿ (ಸಿಆರ್‌ಆರ್‌) ಕಡ್ಡಾಯವಾಗಿ ತೆಗೆದು ಇರಿಸಬೇಕಾದ ಮೊತ್ತವನ್ನು ಶೇ 1ರಷ್ಟು (ಶೇ 4ರಿಂದ ಶೇ 3ಕ್ಕೆ) ತಗ್ಗಿಸಿದೆ.ಏಪ್ರಿಲ್‌ ಮೊದಲ ವಾರ ನಡೆಯಬೇಕಾಗಿದ್ದ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯನ್ನು ಅಪರೂಪಕ್ಕೆ ಅವಧಿಗೆ ಮುಂಚಿತವಾಗಿಯೇ ನಡೆಸಿ ರೆಪೊ ದರ ಕಡಿತ ಮತ್ತು ಸಾಲ ಮರುಪಾವತಿಗೆ ಬಿಡುವು ಘೋಷಣೆಯಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಜಿಡಿಪಿ ಆಶಾಭಂಗ: ‘2019–20ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದ ಆರ್ಥಿಕ ವೃದ್ಧಿ ದರದ ಅಂದಾಜು (ಶೇ 4.7) ಈಡೇರುವ ಸಾಧ್ಯತೆ ಕ್ಷೀಣಿಸಿದೆ‘ ಎಂದೂ ಅವರು ಹೇಳಿದ್ದಾರೆ. ‘ಜಾಗತಿಕ ಆರ್ಥಿಕತೆಯಲ್ಲಿ ಅತಿದೊಡ್ಡ ಹಿಂಜರಿತ ಕಂಡುಬರಲಿದ್ದು ಭಾರತವೂ ಅದರ ಪ್ರಭಾವಕ್ಕೆ ಒಳಗಾಗಲಿದೆ. ಈ ಬಿಕ್ಕಟ್ಟಿಗೆ ದೇಶಿ ಆರ್ಥಿಕತೆ ಹೇಗೆ ಸ್ಪಂದಿಸಲಿದೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸಿದೆ.

‘ಕಚ್ಚಾ ತೈಲ ಅಗ್ಗ ಆಗಿದ್ದರೂ ಜಾಗತಿಕ ಆರ್ಥಿಕತೆಯಲ್ಲಿ ಕಂಡು ಬರಲಿರುವ ಮಂದಗತಿಯು ಭಾರತದ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ. ದಾಖಲೆ ಪ್ರಮಾಣದ ಕೃಷಿ ಉತ್ಪಾದನೆಯ ಕಾರಣಕ್ಕೆ ಆಹಾರ ಧಾನ್ಯಗಳ ಬೆಲೆಗಳು ಅಗ್ಗವಾಗಲಿವೆ. ಬೇಡಿಕೆ ಕುಸಿಯಲಿರುವುದರಿಂದ ಹಣದುಬ್ಬರವೂ ಕಡಿಮೆಯಾಗಲಿದೆ‘ ಎಂದು ಹೇಳಿದ್ದಾರೆ.

ಹಣಕಾಸುವ್ಯವಸ್ಥೆಗೆ₹3.74ಲಕ್ಷಕೋಟಿ

ಆರ್‌ಬಿಐ ಕೈಗೊಂಡ ಹಲವು ಮಹತ್ವದ ನಿರ್ಧಾರಗಳಿಂದ ದೇಶಿಹಣಕಾಸುವ್ಯವಸ್ಥೆಗೆ₹3.74ಲಕ್ಷಕೋಟಿನಗದು ಹರಿದು ಬರಲಿದೆ.

ಬ್ಯಾಂಕ್‌ಗಳು ಒಂದು ದಿನದ ರೆಪೊ ದರದಲ್ಲಿ ಒಂದು ವರ್ಷದಿಂದ3ವರ್ಷಗಳವರೆಗೆ ಸಾಲ ಪಡೆಯುವ ‘ದೀರ್ಘಾವಧಿಯ ರೆಪೊ ಕಾರ್ಯಾಚರಣೆ’ಯಡಿ (ಎಲ್‌ಟಿಆರ್‌ಒ) ಬ್ಯಾಂಕಿಂಗ್‌ವ್ಯವಸ್ಥೆಗೆ₹ 1ಲಕ್ಷಕೋಟಿಯ ನೆರವು ಘೋಷಿಸಿದೆ. ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) ಶೇ 1ರಷ್ಟು ಕಡಿಮೆ ಮಾಡಿ ಶೇ 4 ರಿಂದ ಶೇ 3ಕ್ಕೆ ಇಳಿಸುವುದರಿಂದ ಮಾರುಕಟ್ಟೆಗೆ
₹1.37ಲಕ್ಷಕೋಟಿಬಿಡುಗಡೆಯಾಗಲಿದೆ.

ಬ್ಯಾಂಕ್‌ಗಳು ಸರ್ಕಾರಿ ಸಾಲಪತ್ರಗಳನ್ನು ಅಡಮಾನ ಇರಿಸಿ ‘ಎಂಎಸ್‌ಎಫ್‌’ ದರದಲ್ಲಿ ಆರ್‌ಬಿಐನಿಂದ ಸಾಲ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಮೂರೂ ಕ್ರಮಗಳಿಂದ ಒಟ್ಟಾರೆ ₹3.74ಲಕ್ಷಕೋಟಿಹಣ ಮಾರುಕಟ್ಟೆಗೆ ಹರಿದು ಬರಲಿರುವ ಅಂದಾಜಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.