ADVERTISEMENT

ಕೋವಿಡ್-19 ಸೋಂಕಿತರ ಪ್ರತ್ಯೇಕ ವಾರ್ಡ್‌ನಿಂದ ಮೂವರು ವಿದ್ಯಾರ್ಥಿಗಳು ಪರಾರಿ

ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 12:43 IST
Last Updated 21 ಮಾರ್ಚ್ 2020, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕೋವಿಡ್‌ ಸೋಂಕಿತರ ಪ್ರತ್ಯೇಕ ವಾರ್ಡ್‌ನಿಂದ ಪರಾರಿಯಾಗಿದ್ದ ಉತ್ತರ ಪ್ರದೇಶದ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಮೂವರು ಸಂಶೋಧನಾ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸುವಲ್ಲಿ ಕಾಶ್ಮೀರದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಾಶ್ಮೀರದ ಮೂವರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡದೆ ಹಾಗೂ ದಾಖಲಾಗಿದ್ದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯ ಅನುಮತಿ ಪಡೆಯದೇ ಪರಾರಿಯಾಗಿದ್ದರು. ಈ ಕುರಿತು ಮೂವರನ್ನು ಪತ್ತೆ ಹಚ್ಚುವಂತೆ ಕೋರಿ ವಿಶ್ವವಿದ್ಯಾಲಯದ ಅಧಿಕಾರಿಗಳು ಕಾಶ್ಮೀರದ ಆಡಳಿತಕ್ಕೆ ಪತ್ರ ಬರೆದಿದ್ದರು.

ಪರಾರಿಯಾಗಿದ್ದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಇಬ್ಬರು ಹಾಗೂ ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಗೆ ಸೇರಿದ ಒಬ್ಬ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಗಣ್ಯ ವ್ಯಕ್ತಿಗಳ ದ್ವಾರದಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ತಪಾಸಣೆಗೆ ಒಳಪಡದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಸೌದಿ ಅರೇಬಿಯಾದಿಂದ ಬಂದ ಕೋವಿಡ್‌ ಸೋಂಕಿತ 67 ವರ್ಷದ ಮಹಿಳೆಯು ತನ್ನ ಅಳಿಯ ಐಪಿಎಸ್‌ ಅಧಿಕಾರಿಯ ನೆರವಿನೊಂದಿಗೆ ತಪಾಸಣೆಯಿಂದ ತಪ್ಪಿಸಿಕೊಂಡಿದ್ದರು.

ADVERTISEMENT

ವಿಮಾನ ನಿಲ್ದಾಣದಲ್ಲಿ ಬಹುತೇಕ ಗಣ್ಯ ವ್ಯಕ್ತಿಗಳು ಹಾಗೂ ಅವರ ಸಂಬಂಧಿಕರು ಕಡ್ಡಾಯ ತಪಾಸಣೆಗೆ ಒಳಪಡುತ್ತಿಲ್ಲ. ಇದರಿಂದ ಗಣ್ಯ ವ್ಯಕ್ತಿಗಳ ದ್ವಾರವು ಕೊರೊನಾ ತಡೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.