ADVERTISEMENT

ಮನೆಮನೆ ಹಾಲು ವಿತರಿಸುತ್ತಾರೆ ತ್ರಿಶೂರ್‌ ಮೇಯರ್ ಅಜಿತಾ ವಿಜಯನ್!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:42 IST
Last Updated 18 ಡಿಸೆಂಬರ್ 2018, 12:42 IST
   

ತ್ರಿಶೂರ್: ಅಜಿತಾ ವಿಜಯನ್ ಎಂಬ ಹೆಸರು ಕೇಳಿದರೆ ಸಾಕು; ಕೇರಳದ ತ್ರಿಶೂರ್‌ನ ಕಣಿಮಂಗಲಂ ನಿವಾಸಿಗಳ ಮನದಲ್ಲಿ ಹಾಲು ವಿತರಿಸುವ ಮಹಿಳೆಯೊಬ್ಬರ ಚಿತ್ರ ಹಾದುಹೋಗುತ್ತದೆ. ಕಾರಣವಿಷ್ಟೆ, ಕಣಿಮಂಗಲಂನ ಸುಮಾರು 200 ಮನೆಗಳಿಗೆ ಕಳೆದ 18 ವರ್ಷಗಳಿಂದ ಪ್ರತಿನಿತ್ಯ ಬೆಳಿಗ್ಗೆ ತಪ್ಪದೇ ಹಾಲಿನ ಪೊಟ್ಟಣ ಹಾಕುತ್ತಾರೆ ಅಜಿತಾ. ಇತ್ತಿಚೆಗೆ ಅವರು ತ್ರಿಶೂರ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ನಗರಾಡಳಿತದ ಹೊಣೆ ಹೊತ್ತರೂ ಇನ್ನು ಮುಂದೆಯೂ ಹಾಲು ವಿತರಿಸಲಿದ್ದೇನೆ ಎಂದಿದ್ದಾರೆ ಅಜಿತಾ!

ಹಾಲು ವಿತರಿಸುವ ಕೆಲಸ ಮುಂದುವರಿಸುವುದರಿಂದ ಮೇಯರ್ ಆಗಿ ಕೆಲಸ ಮಾಡುವುದು ಇನ್ನೂ ಸುಲಭ ಎಂಬುದು ಅವರ ಅಭಿಪ್ರಾಯ. ‘ಹಾಲು ವಿತರಿಸುವ ನೆಪದಿಂದಲಾದರೂ ಹಲವು ಮನೆಗಳಿಗೆ ಭೇಟಿ ನೀಡುವುದು ಮತ್ತು ಜನರ ಜತೆ ಬೆರೆಯುವುದು ಸಾಧ್ಯವಾಗಲಿದೆ. ಇದರಿಂದಾಗಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ನಾಪತ್ತೆಯಾಗುವ ಜನಪ್ರತಿನಿಧಿಗಳ ಪಟ್ಟಿಯಲ್ಲಿ ನನ್ನನ್ನು ಯಾರೂ ಗುರುತಿಸಲಾರರು‘ ಎನ್ನುತ್ತಾರೆ ಅವರು.

20 ವರ್ಷಗಳಿಂದ ಸಿಪಿಐ(ಎಂ) ಸದಸ್ಯೆ

ADVERTISEMENT

1999ರಿಂದಲೂ ಸಿಪಿಐ(ಎಂ) ಸದಸ್ಯೆಯಾಗಿರುವ ಅಜಿತಾ 2005ರಲ್ಲಿ ಕೌನ್ಸಿಲರ್ ಆಗಿ, 2010ರಲ್ಲಿ ಪಕ್ಷದ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಕಳೆದ ಐದು ವರ್ಷಗಳಿಂದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣ ಆ ಹುದ್ದೆಯಿಂದ ತೆರವಾಗಿದ್ದಾರೆ (ಸರ್ಕಾರಿ ವೇತನ ಪಡೆಯುವವರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ನಿಯಮ ಇರುವುದರಿಂದ). ಆದರೆ, ಸದ್ಯ ಅಂಗನವಾಡಿ ಶಿಕ್ಷಕಿಯರಿಗೆ ಈ ನಿಷೇಧ ತೆರವಾಗಿದ್ದು, ಶಿಕ್ಷಕಿಯಾಗಿ ಮುಂದುವರಿಯಲು ಅಜಿತಾ ಅರ್ಹರಾಗಿದ್ದಾರೆ.

ಅಜಿತಾ ಅವರ ಪತಿ ವಿಜಯನ್ ಸಹ ಸಿಪಿಐ(ಎಂ) ನಾಯಕರಾಗಿದ್ದು, ಕಳೆದ 22 ವರ್ಷಗಳಿಂದ ಮಿಲ್ಮಾ ಬೂತ್ (ಹಾಲಿನ ಅಂಗಡಿ) ನಡೆಸುತ್ತಿದ್ದಾರೆ. ಈ ಬೂತ್‌ನಿಂದಲೇ ಅಜಿತಾ ಅವರು ಮನೆಮನೆ ಹಾಲು ವಿತರಣೆ ಮಾಡುತ್ತಿರುವುದು. ಈ ದಂಪತಿಗೆ ಒಬ್ಬ ಮಗಳಿದ್ದು, ಕಳೆದ ತಿಂಗಳು ವಿವಾಹವೂ ನೆರವೇರಿದೆ.

ಹಾಲು ವಿತರಿಸುವ ಕೆಲಸವನ್ನು ಇನ್ನೂ ಮುಂದುವರಿಸುತ್ತೀರಾ ಎಂಬ ಪ್ರಶ್ನೆಯಿಂದ ಅಚ್ಚರಿಗೊಂಡ ಅವರು ಉತ್ತರಿಸಿದ್ದು ಹೀಗೆ; ‘ನಾವು ಜೀವನ ಮುಂದುವರಿಸಬೇಕು ತಾನೇ? ಬದುಕಬೇಕೆಂದರೆ ಕೆಲಸವನ್ನೂ ಮಾಡಬೇಕು. ಕಠಿಣ ಪರಿಶ್ರಮಪಡಬೇಕು. ಮೇಯರ್ ಕೆಲಸವನ್ನು ಅದರ ಅವಧಿಯಲ್ಲಿ ಮಾಡಲಿದ್ದೇನೆ. ಹಾಲು ವಿತರಿಸುವ ಕೆಲಸವನ್ನು ಅದರ ಸಮಯದಲ್ಲಿ ಮಾಡಲಿದ್ದೇನೆ. ನಾನು ಬೆಳಿಗ್ಗೆ ಗಂಟೆ 4 ಅಥವಾ 4.30ಕ್ಕೆ ಎದ್ದು, 5 ಗಂಟೆಯಿಂದ ಹಾಲು ವಿತರಿಸುವ ಕೆಲಸ ಶುರುಮಾಡುತ್ತೇನೆ. ವಿಶೇಷ ಕಾರ್ಯಕ್ರಮಗಳ ಹೊರತಾಗಿ ಮೇಯರ್ ಕೆಲಸ ಆರಂಭವಾಗುವುದು ಬೆಳಿಗ್ಗೆ 10 ಗಂಟೆಗೆ. ಹೀಗಾಗಿ ಮೇಯರ್ ಕೆಲಸ ಮಾಡಲು ಏನೂ ತೊಂದರೆ ಇಲ್ಲ’.

‘ಕಳೆದ ಮೂರು ವರ್ಷಗಳಲ್ಲಿ ಸಿಪಿಐ(ಎಂ) ಮಾಡಿರುವ ಕೆಲಸಗಳನ್ನು ಮೇಯರ್ ಆಗಿ ಮುಂದುವರಿಸಲಿದ್ದೇನೆ. ಪಕ್ಷವು ಮಹಿಳೆಯರಿಗಾಗಿ ಹಮ್ಮಿಕೊಂಡಿರುವ ಶಿಲಾಡ್ಜ್ ಹಾಗೂ ಇತರ ಯೋಜನೆಗಳನ್ನು ಒಬ್ಬ ಸ್ತ್ರೀಯಾಗಿ ಮುಂದುವರಿಸಲು ಬಯಸುತ್ತೇನೆ. ತ್ರಿಶೂರ್ ಅನ್ನು ಮಹಿಳೆಯರಿಗೆ ಸುರಕ್ಷಿತ ನಗರವನ್ನಾಗಿ ರೂಪಿಸಲು ಪ್ರಯತ್ನಿಸುತ್ತೇನೆ’ ಎಂದು ಮೇಯರ್ ಆಗಿ ತಮ್ಮ ಯೋಜನೆಗಳ ಬಗ್ಗೆ ಅಜಿತಾ ಮಾಹಿತಿ ನೀಡಿರುವುದನ್ನು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.