ADVERTISEMENT

ಟಾಟಾ ಇನ್ಸ್‌ಟಿಟ್ಯೂಟ್‌: ಸಿಬ್ಬಂದಿಗೆ ಅರ್ಧ ವೇತನ ಪಾವತಿ

ಪ್ರತಿಷ್ಠಿತ ಟಿಐಎಫ್‌ಆರ್‌ಗೆ ಅನುದಾನ ಕೊರತೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:00 IST
Last Updated 7 ಮಾರ್ಚ್ 2019, 19:00 IST
ಟಿಐಎಫ್‌ಆರ್‌, ಮುಂಬೈ
ಟಿಐಎಫ್‌ಆರ್‌, ಮುಂಬೈ   

ನವದೆಹಲಿ: ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲೊಂದಾದ ಟಾಟಾ ಇನ್ಸ್‌ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ (ಟಿಐಎಫ್‌ಆರ್‌) ಅನುದಾನ ಕೊರತೆ ಎದುರಿಸುತ್ತಿದೆ. ಹೀಗಾಗಿ, ತನ್ನ ಸಿಬ್ಬಂದಿಗೆ ಫೆಬ್ರುವರಿ ತಿಂಗಳ ವೇತನದಲ್ಲಿ ಶೇ 50ರಷ್ಟು ಮೊತ್ತವನ್ನು ಮಾತ್ರ ಪಾವತಿಸಿದೆ.

‘ಅರ್ಧದಷ್ಟು ಮಾತ್ರ ವೇತನ ಬಂದಿದ್ದರಿಂದ ನನಗೆ ಅಚ್ಚರಿಯಾಯಿತು. ಈ ಸಂಸ್ಥೆಗೆ ಸೇರಿ 9 ವರ್ಷಗಳಾಗಿವೆ. ಹಿಂದೆ ಯಾವತ್ತೂ ಈ ರೀತಿ ಆಗಿರಲಿಲ್ಲ. ಅಲ್ಲದೇ, ಈ ಬಾರಿ ವೇತನ ಸಹ ಒಂದು ದಿನ ತಡವಾಗಿ ಪಾವತಿಯಾಗಿದೆ’ ಎಂದು ಟಿಐಎಫ್‌ಆರ್‌ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಅನುದಾನ ಕೊರತೆ ಉಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು, ‘ತಾಂತ್ರಿಕ ಕಾರಣಗಳಿಂದಾಗಿ ಟಿಐಎಫ್‌ಆರ್‌ಗೆ ನೀಡಿರುವ ಅನುದಾನದಲ್ಲಿ ಕೊರತೆ ಕಂಡು ಬಂದಿದೆ. ಒಂದೆರಡು ದಿನಗಳಲ್ಲಿ ನಿಗದಿತ ಅನುದಾನ ಸಂಸ್ಥೆಗೆ ತಲುಪಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ದಕ್ಷಿಣ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟಿಐಎಫ್‌ಆರ್‌ ಒಟ್ಟು ಆರು ಶಾಖೆಗಳನ್ನು ಹೊಂದಿದೆ. ಇವುಗಳ ಪೈಕಿ ಬೆಂಗಳೂರಿನಲ್ಲಿ ಮೂರು ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಅಣು ಶಕ್ತಿ ಇಲಾಖೆ ಅಡಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಗೆ ಶೇ 99ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತದೆ.

1955ರಲ್ಲಿ ಸ್ಥಾಪನೆ

ವೈಜ್ಞಾನಿಕ ಸಂಶೋಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಸರ್‌ ದೊರಾಬ್ಜಿ ಟಾಟಾ ಟ್ರಸ್ಟ್‌ ನಡುವೆ ಏರ್ಪಟ್ಟ ತ್ರಿಪಕ್ಷೀಯ ಒಪ್ಪಂದದ ಅನ್ವಯ ಈ ಸಂಸ್ಥೆಯನ್ನು 1955ರಲ್ಲಿ ಸ್ಥಾಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.