ADVERTISEMENT

ಸಿಯುಇಟಿ ವಿರುದ್ಧ ತಮಿಳುನಾಡು ವಿಧಾನಸಭೆ ನಿರ್ಣಯ

ಪಿಟಿಐ
Published 11 ಏಪ್ರಿಲ್ 2022, 11:08 IST
Last Updated 11 ಏಪ್ರಿಲ್ 2022, 11:08 IST
ಎಂ.ಕೆ ಸ್ಟಾಲಿನ್
ಎಂ.ಕೆ ಸ್ಟಾಲಿನ್   

ಚೆನ್ನೈ: ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪ್ರವೇಶ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಹಿಂಪಡೆಯಲು ಒತ್ತಾಯಿಸಿ ತಮಿಳುನಾಡು ವಿಧಾನಸಭೆ ಗೊತ್ತುವಳಿ ಅಂಗೀಕರಿಸಿದೆ.

ಸಿಯುಇಟಿಯು ನೀಟ್ ರೀತಿ ಶಾಲಾ ಶಿಕ್ಷಣವನ್ನು ಬದಿಗೊತ್ತಿ, ಒಟ್ಟಾರೆ ಅಭಿವೃದ್ಧಿ ಆಧಾರಿತ ಶಿಕ್ಷಣವನ್ನು ಮೂಲೆಗುಂಪು ಮಾಡುತ್ತದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.

ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಕೈಗೊಂಡ ಈ ನಿರ್ಣಯವನ್ನು ಬಿಜೆಪಿ ಹೊರತುಪಡಿಸಿ, ಆಡಳಿತಾರೂಢ ಡಿಎಂಕೆ, ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳು ಬೆಂಬಲಿಸಿವೆ. ಅಲ್ಲದೆ ತಮಿಳುನಾಡಿನಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಎಐಎಡಿಎಂಕೆ ಸಹ ಬೆಂಬಲಿಸಿದೆ.

ADVERTISEMENT

ಕೇಂದ್ರೀಯ ವಿವಿಗಳ ಪ್ರವೇಶಾತಿಗೆ 12ನೇ ತರಗತಿಯಲ್ಲಿ ವಿದ್ಯಾರ್ಥಿಗಳು ತೆಗೆದ ಅಂಕಗಳನ್ನು ಪರಿಗಣಿಸದೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ನಡೆಸುವ ಸಿಯುಇಟಿ ಪರೀಕ್ಷೆಯಲ್ಲಿ ತೆಗೆದ ಅಂಕಗಳನ್ನು ಪರಿಗಣಿಸಲಾಗುತ್ತದೆ. ಸಿಯುಇಟಿ ಪರೀಕ್ಷೆಯನ್ನು ರಾಜ್ಯಗಳು ಆಯ್ಕೆ ಮಾಡಿಕೊಂಡರೆ, ರಾಜ್ಯದಲ್ಲಿರುವ ಖಾಸಗಿ ಮತ್ತು ಡೀಮ್ಡ್ ವಿವಿಗಳು ಸಹ ಇದೇ ನೀತಿಯನ್ನು ಅನುಸರಿಸಬೇಕು.

ಎನ್‌ಸಿಇಆರ್‌ಟಿ ಪಠ್ಯಕ್ರಮ ಆಧಾರಿತ ಯಾವುದೇ ಪ್ರವೇಶ ಪರೀಕ್ಷೆಯು ದೇಶದಾದ್ಯಂತ ವಿವಿಧ ರಾಜ್ಯಗಳ ಬೋರ್ಡ್ ಪಠ್ಯಕ್ರಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡುವುದಿಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.