ADVERTISEMENT

ಕಡಲೂರು ಮಳೆ ಹಾನಿ: ಸ್ಟಾಲಿನ್‌ ಪರಿಶೀಲನೆ

ಪಿಟಿಐ
Published 14 ನವೆಂಬರ್ 2022, 15:49 IST
Last Updated 14 ನವೆಂಬರ್ 2022, 15:49 IST
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಸೋಮವಾರ ಕಡಲೂರು ಜಿಲ್ಲೆಗೆ ಭೇಟಿ ನೀಡಿ ಮಳೆ ಹಾನಿ ವೀಕ್ಷಿಸಿದರು– ಪಿಟಿಐ ಚಿತ್ರ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಸೋಮವಾರ ಕಡಲೂರು ಜಿಲ್ಲೆಗೆ ಭೇಟಿ ನೀಡಿ ಮಳೆ ಹಾನಿ ವೀಕ್ಷಿಸಿದರು– ಪಿಟಿಐ ಚಿತ್ರ   

ಕಡಲೂರು: ಭಾರಿ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿರುವ ತಮಿಳುನಾಡಿನ ಕಡಲೂರು ಮತ್ತು ಮೈಲಾಡುತುರೈ ಜಿಲ್ಲೆಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಬೆಳೆ ಹಾನಿಯಿಂದಾಗಿರುವ ನಷ್ಟದ ಪ್ರಮಾಣವನ್ನು ಅಂದಾಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಟಾಲಿನ್‌ ಅವರು ತಿಳಿಸಿದ್ದಾರೆ.

ಬೆಳೆ ಹಾನಿ ಸಂಭವಿಸಿರುವ ರೈತರಿಗೆ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಕೆ.ಪಳನಿಸ್ವಾಮಿ ಭಾನುವಾರ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್‌, ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಲು ಮತ್ತು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ. ಅದರ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ.

ADVERTISEMENT

ಕಡಲೂರು ಮತ್ತು ಮೈಲಾಡುತುರೈ ಸೇರಿದಂತೆ 24 ಜಿಲ್ಲೆಗಳ 45,826 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಜಲಾವೃತವಾಗಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಕೆ.ಕೆ.ಎಸ್‌.ಎಸ್‌.ಆರ್‌. ರಾಮಚಂದ್ರನ್‌ ವಿವರಿಸಿದ್ದಾರೆ.

ಒಂಬತ್ತು ಜಿಲ್ಲೆಗಳ 52,751 ಮಂದಿಗೆ 99 ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ ಎಂದೂ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರು ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ₹4,100 ಹಾಗೂ 10 ಕೆ.ಜಿ. ಅಕ್ಕಿ ವಿತರಿಸಿದರು. ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಜೊತೆಗಿದ್ದರು.

ಈಶಾನ್ಯ ಮುಂಗಾರಿನ ಪರಿಣಾಮ ತಮಿಳುನಾಡಿನಾದ್ಯಂತ ಭಾರಿ ಮಳೆ ಸುರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.