ADVERTISEMENT

ತಮಿಳುನಾಡು: ಕುಲಪತಿಗಳ ಸಭೆ ಕರೆದ ರಾಜ್ಯಪಾಲ

ಉಪರಾಷ್ಟ್ರಪತಿಗೆ ಆಹ್ವಾನ; ವಿವಿಧ ಪಕ್ಷಗಳಿಂದ ಪ್ರತಿಭಟನೆಯ ಎಚ್ಚರಿಕೆ

ಪಿಟಿಐ
Published 22 ಏಪ್ರಿಲ್ 2025, 14:06 IST
Last Updated 22 ಏಪ್ರಿಲ್ 2025, 14:06 IST
ಆರ್‌.ಎನ್‌. ರವಿ
ಆರ್‌.ಎನ್‌. ರವಿ   

ಚೆನ್ನೈ: ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯನ್ನು ವಾರಾಂತ್ಯದಲ್ಲಿ ಕರೆದಿರುವ ರಾಜ್ಯಪಾಲ ಆರ್‌.ಎನ್‌. ರವಿ ಅವರು, ಉದ್ಘಾಟನೆಗೆ ಉಪರಾಷ್ಟ್ರಪತಿಯನ್ನು ಆಹ್ವಾನಿಸಿದ್ದಾರೆ.

ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಅಧಿಕಾರವನ್ನು ರಾಜ್ಯಪಾಲರಿಂದ ವಾಪಸ್‌ ಪಡೆಯುವ ಮಸೂದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಕುಲಪತಿಗಳು, ರಿಜಿಸ್ಟ್ರಾರ್‌ಗಳೊಂದಿಗೆ ಸಭೆ ನಡೆಸಿದ ವಾರದ ನಂತರ ರಾಜ್ಯಪಾಲರು ಈ ಸಮಾವೇಶ ಆಯೋಜಿಸಿದ್ದಾರೆ.

ಈ ಸಭೆಯು ರಾಜ್ಯಪಾಲರು ಮತ್ತು ತಮಿಳುನಾಡು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆಯಾಗಲಿದೆ ಎನ್ನಲಾಗಿದೆ.

ADVERTISEMENT

ನೀಲಗಿರಿ ಜಿಲ್ಲೆಯಲ್ಲಿ ಏ. 25 ಮತ್ತು 26ರಂದು ನಡೆಯಲಿರುವ ಸಭೆಯನ್ನು ಬಹಿಷ್ಕರಿಸುವಂತೆ ಎಡಪಕ್ಷಗಳು ಕುಲಪತಿಗಳಿಗೆ ಕರೆ ನೀಡಿವೆ.

ಕುಲಪತಿಗಳ ಸಭೆಯನ್ನು ಉದ್ಘಾಟಿಸಿ ಉಪರಾಷ್ಟ್ರಪತಿ ಮಾತನಾಡಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಏ. 27ರಂದು ರಾಜಧಾನಿಗೆ ಮರಳುವ ಮುನ್ನ ಕೊಯಮತ್ತೂರಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಊಟಿಯ ರಾಜಭವನದಲ್ಲಿ ಸತತ ನಾಲ್ಕನೇ ವರ್ಷ ಕುಲಪತಿಗಳ ಸಭೆ ಆಯೋಜಿಸಲಾಗಿದೆ. ವಿವಿಧ ವಿಷಯಗಳ ಅಧಿವೇಶನ ನಡೆಯಲಿದೆ. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್‌ ಕುಮಾರ್‌ ಸೂದ್‌ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಉಲ್ಲಂಘನೆ:

‘ರಾಜ್ಯಪಾಲರ ನಡೆಯು ಸುಪ್ರೀಂ ಕೋರ್ಟ್‌ ತೀರ್ಪಿನ ತಿರಸ್ಕಾರವಷ್ಟೇ ಅಲ್ಲ, ಸಾಂವಿಧಾನಿಕ ನಿಯಮಗಳ ಉಲ್ಲಂಘನೆ’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಕಿಡಿಕಾರಿದ್ದಾರೆ.

ಸಭೆಗೆ ಹಾಜರಾಗದಂತೆ ಕುಲಪತಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಏ. 25ರಂದು ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರು ನೀಲಗಿರಿಗೆ ಭೇಟಿ ನೀಡಿದ ಸಂದರ್ಭ ಪ್ರತಿಭಟಿಸುವುದಾಗಿ ಟಿಎನ್‌ಸಿಸಿ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ತಿಳಿಸಿದ್ದಾರೆ.

ರವಿ ಅವರ ನಡೆಯನ್ನು ಡಿಎಂಕೆಯ ಮಿತ್ರಪಕ್ಷ ವಿಸಿಕೆ ಖಂಡಿಸಿದೆ. ಹೊಸ ಕಾನೂನಿನಂತೆ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರ ಪಾತ್ರವಿಲ್ಲ ಎಂದು ಪಕ್ಷದ ವರಿಷ್ಠ ತೊಲ್‌ ತಿರುಮವಲವನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.