ಚೆನ್ನೈ: ‘ಸಿ.ಎಂ ಸರ್, ನಿಮಗೆ ಸೇಡು ತೀರಿಸಿಕೊಳ್ಳುವ ಇಂಗಿತ ಇದ್ದರೆ, ನನಗೆ ಏನು ಬೇಕಾದರೂ ಮಾಡಿ. ನನ್ನ ಪಕ್ಷದ ಕಾರ್ಯಕರ್ತರನ್ನು ಬಿಟ್ಟುಬಿಡಿ. ನಾನು ಕಚೇರಿ ಅಥವಾ ನಿವಾಸದಲ್ಲಿ ಇರುತ್ತೇನೆ’ ಎಂದು ಎಂದು ಟಿವಿಕೆ ಸಂಸ್ಥಾಪಕ, ನಟ ವಿಜಯ್ ಸವಾಲು ಹಾಕಿದ್ದಾರೆ.
‘ಕರೂರು ಕಾಲ್ತುಳಿತ ದುರಂತದ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ನನ್ನ ಭೇಟಿಯು ಅಹಿತಕರ ಘಟನೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕಾಗಿ ಭೇಟಿ ಮಾಡಿಲ್ಲ’ ಎಂದು ಅವರು ವಿಡಿಯೊ ಸಂದೇಶದ ಮೂಲಕ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
‘ನನ್ನ ಜೀವನದಲ್ಲಿ ಈವರೆಗೆ ಇಂಥದ್ದೊಂದು ನೋವು ಅನುಭವಿಸಿರಲಿಲ್ಲ. ಶೀಘ್ರವೇ ನಿಮ್ಮನ್ನು (ಸಂತ್ರಸ್ತರು) ಭೇಟಿ ಮಾಡುವೆ’ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ದುರಂತದ ಕುರಿತ ಸತ್ಯಾಂಶ ಶೀಘ್ರವೇ ಹೊರಬರಲಿದೆ ಎಂದಿದ್ದಾರೆ.
ನಾವು ತಪ್ಪು ಮಾಡಿಲ್ಲ:
‘ಗೊತ್ತುಪಡಿಸಲಾದ ಸ್ಥಳದಲ್ಲಿ ಮಾತನಾಡಿದ್ದು ಬಿಟ್ಟರೆ ಬೇರೇನೂ ತಪ್ಪು ಮಾಡಿಲ್ಲ. ಪೊಲೀಸರು ನಮ್ಮ ನಾಯಕರು, ಸ್ನೇಹಿತರು, ಸಾಮಾಜಿಕ ಜಾಲತಾಣ ಪಾಲುದಾರರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದಿದ್ದಾರೆ.
‘ಜನರ ಸುರಕ್ಷತೆ ವಿಚಾರದಲ್ಲಿ ರಾಜಿಯಾಗಲು ನಾವು ಸಿದ್ಧರಿರಲಿಲ್ಲ. ಹೀಗಾಗಿಯೇ ರಾಜಕೀಯ ವಿಚಾರಗಳನ್ನೆಲ್ಲ ಬದಿಗೊತ್ತಿ ಸುರಕ್ಷಿತ ಪ್ರದೇಶದಲ್ಲಿ ರ‍್ಯಾಲಿ ನಡೆಸಲು ಪೊಲೀಸರ ಬಳಿ ಅನುಮತಿ ಕೋರಿದೆವು. ಆದರೆ, ಏನಾಗಬಾರದಿತ್ತೋ ಅಂಥ ದುರಂತ ಘಟಿಸಿತು. ನನ್ನ ಹೃದಯ ಭಾರವಾಗಿದೆ’ ಎಂದಿದ್ದಾರೆ.
‘ನನ್ನ ರಾಜಕೀಯ ಪಯಣವು ಹೊಸ ಚೈತನ್ಯದೊಂದಿಗೆ ಮುಂದುವರಿಯಲಿದೆ’ ಎಂದೂ ಹೇಳಿದ್ದಾರೆ.
ಟಿವಿಕೆಯ ಇಬ್ಬರಿಗೆ 14 ದಿನ ನ್ಯಾಯಾಂಗ ಬಂಧನ
ಕರೂರು (ಪಿಟಿಐ): ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಇಬ್ಬರನ್ನು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಟಿವಿಕೆ ಪಕ್ಷದ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ವಿ.ಪಿ. ಮಥಿಯಳಗನ್ ಕರೂರು ಕೇಂದ್ರ ಜಿಲ್ಲಾ ಕಾರ್ಯದರ್ಶಿ ಕಾಶಿ ಪೌನ್‌ರಾಜ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು ಸದ್ಯ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಮತ್ತು ಉಪ ಪ್ರಧಾನ ಕಾರ್ಯದರ್ಶಿ ನಿರ್ಮಲಾ ಕುಮಾರ್ ಅವರ ಹೆಸರನ್ನೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದ್ದು ಇನ್ನಷ್ಟೇ ಅವರನ್ನು ಬಂಧಿಸಬೇಕಿದೆ ಎಂದರು.
ಹೇಮಾ ಮಾಲಿನಿ ನೇತೃತ್ವದ ನಿಯೋಗ ಭೇಟಿ
ಬಿಜೆಪಿ ಸಂಸದೆ ಹೇಮಾ ಮಾಲಿನಿ ನೇತೃತ್ವದ 8 ಸದಸ್ಯರ ನಿಯೋಗವು ಮಂಗಳವಾರ ಕರೂರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿತು. ನಿಯೋಗವು ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿತು ಎಂದು ಮೂಲಗಳು ತಿಳಿಸಿವೆ. ‘ನಟ ವಿಜಯ್ ಅವರ ರ‍್ಯಾಲಿ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಕಿರಿದಾದ ಸ್ಥಳದಲ್ಲಿ ಅಪಾರ ಸಂಖ್ಯೆಯ ಜನರು ಸೇರಿದ್ದು ಶಂಕೆ ಮೂಡಿಸುವಂತಿದೆ. ಇದು ಸ್ವಾಭಾವಿಕ ದುರಂತ ಅಲ್ಲ’ ಎಂದು ಬಿಜೆಪಿ ಸಂಸದೆ ಹೇಳಿದರು.
ಟಿವಿಕೆ ಅಧವ್ ಅರ್ಜುನ ಪೋಸ್ಟ್‌ಗೆ ಡಿಎಂಕೆ ಕಿಡಿ
ಟಿವಿಕೆಯ ಹಿರಿಯ ನಾಯಕ ಅಧವ್ ಅರ್ಜುನ ಅವರು ‘ಝೆನ್ ಜಿ ಕ್ರಾಂತಿ’ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟ್‌ಗೆ ಡಿಎಂಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದೆ.
ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ.ರಾಜಾ ಅವರು ‘ಅರ್ಜುನ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ನೇಪಾಳದಂತೆ ತಮಿಳುನಾಡಿನಲ್ಲಿಯೂ ಕ್ರಾಂತಿಗೆ ಕರೆ ನೀಡಿದ್ದಾರೆ. ಅವರ ಪೋಸ್ಟ್ ಅನ್ನು ಅಳಿಸುವಂತೆ ಮಾಡಿದ ಜನರಿಗೆ ಧನ್ಯವಾದ. ಪೋಸ್ಟ್ ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ವಿರುದ್ಧವಾಗಿತ್ತು’ ಎಂದು ಹೇಳಿದ್ದಾರೆ. ಈ ಮಧ್ಯೆ ದುರಂತದ ಸಂತ್ರಸ್ತರನ್ನು ಶೀಘ್ರವೇ ಭೇಟಿ ಮಾಡುವುದಾಗಿ ಅಧವ್ ಅರ್ಜುನ ಅವರು ಹೇಳಿದ್ದಾರೆ. ‘ನನ್ನ ಕುಟುಂಬಗಳು ಅತಿ ದೊಡ್ಡ ನಷ್ಟ ಮತ್ತು ನೋವು ಅನುಭವಿಸುತ್ತಿವೆ. ನಾನೀಗ ಮಾತನಾಡುವ ಸ್ಥಿತಿಯಲ್ಲಿಲ್ಲ. ಶೀಘ್ರವೇ ಅವರನ್ನು ಭೇಟಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.