ADVERTISEMENT

ಕಾನೂನು ಜಾರಿಗೊಳಿಸುವವರೇ ಉಲ್ಲಂಘಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ರಾಹುಲ್‌ ಕಿಡಿ

ಪಿಟಿಐ
Published 8 ಸೆಪ್ಟೆಂಬರ್ 2024, 2:47 IST
Last Updated 8 ಸೆಪ್ಟೆಂಬರ್ 2024, 2:47 IST
<div class="paragraphs"><p>ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ</p></div>

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

   

ನವದೆಹಲಿ: ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಂವಿಧಾನ ಮತ್ತು ಕಾನೂನುನನ್ನು ಜಾರಿಗೊಳಿಸುವ ಜವಾಬ್ದಾರಿ ಹೊಂದಿರುವವರೇ, ಅವುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್, ಉತ್ತರ ಪ್ರದೇಶದ ಸುಲ್ತಾನ್‌ಪುರದ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರ ಕಣ್ಣೀರು ನಮ್ಮನ್ನು ಪ್ರಶ್ನೆ ಮಾಡುವಂತಿದೆ ಎಂದು ಕಿಡಿಕಾರಿದ್ದಾರೆ.

ADVERTISEMENT

'ಆರೋಪ ಸಾಬೀತಾದರೆ ಅಪರಾಧಿಗೆ ಯಾವ ಶಿಕ್ಷೆ ನೀಡಬೇಕೆಂಬುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ದರೋಡೆ ಆರೋಪದಡಿ ಮಂಗೇಶ್ ಯಾದವ್‌ನನ್ನು ಎನ್‌ಕೌಂಟರ್ ಮಾಡಿದ್ದು ಸರಿಯಾದ ಕ್ರಮವಲ್ಲ. ಈ ಮೂಲಕ ಬಿಜೆಪಿಗೆ ಕಾನೂನು ಸುವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ' ಎಂದು ರಾಹುಲ್‌ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಎಲ್ಲಾ ಅನುಮಾನಾಸ್ಪದ ಎನ್‌ಕೌಂಟರ್‌ಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಗಾಂಧಿ ಆಗ್ರಹಿಸಿದ್ದಾರೆ.

'ಉತ್ತರ ಪ್ರದೇಶದ ಎಸ್‌ಟಿಎಫ್‌ ಪಡೆಯನ್ನು ಬಿಜೆಪಿ ಸರ್ಕಾರ 'ಕ್ರಿಮಿನಲ್ ಗ್ಯಾಂಗ್'ನಂತೆ ನಡೆಸಿಕೊಳ್ಳಲಾಗುತ್ತಿದೆ. ಎಸ್‌ಟಿಎಫ್‌ನ ಹತ್ತಾರು ಎನ್‌ಕೌಂಟರ್‌ಗಳು ಪ್ರಶ್ನಾರ್ಹವಾಗಿವೆ. ಇಂತಹ ಪ್ರಕರಣಗಳ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿರುವುದು ಏಕೆ?' ಎಂದು ರಾಹುಲ್ ಪ್ರಶ್ನಿಸಿದ್ದಾರೆ.

'ಬಿಜೆಪಿ ಸರ್ಕಾರಗಳು ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸುತ್ತಿರುವುದು ಬಹಿರಂಗವಾಗಿದ್ದು, ಕ್ಯಾಮರಾಗಳ ಮುಂದೆ ಅವುಗಳನ್ನು ಪಾಲಿಸುತ್ತಿರುವಂತೆ ಬಿಂಬಿಸಲಾಗುತ್ತಿದೆ' ಎಂದು ಟೀಕಿಸಿದ್ದಾರೆ.

ಸುಲ್ತಾನ್‌ಪುರದ ಆಭರಣ ಮಳಿಗೆಯಲ್ಲಿ ₹1.5 ಕೋಟಿ ಮೌಲ್ಯದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಮಂಗೇಶ್ ಯಾದವ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.