ADVERTISEMENT

ಕೇಂದ್ರದ ವಿರುದ್ಧ ಕರೆ ನೀಡಲಾಗಿದ್ದ ಎರಡು ದಿನಗಳ ಮುಷ್ಕರ 1 ತಿಂಗಳು ಮುಂದಕ್ಕೆ

ಪಿಟಿಐ
Published 29 ಜನವರಿ 2022, 14:41 IST
Last Updated 29 ಜನವರಿ 2022, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೇಂದ್ರದ ಸರ್ಕಾರದ ನೀತಿಗಳ ವಿರುದ್ಧ ಫೆಬ್ರವರಿ 23-24ರಂದು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಮುಷ್ಕರ ಕೋವಿಡ್‌ ಸಾಂಕ್ರಾಮಿಕ ಮತ್ತು ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ.

ಕೇಂದ್ರ ಟ್ರೇಡ್ ಯೂನಿಯನ್‌ಗಳು (ಸಿಟಿಯುಎಸ್‌) ಮತ್ತು ವಲಯವಾರು ಸಂಘಟನೆಗಳ ಜಂಟಿ ವೇದಿಕೆಯ ಆನ್‌ಲೈನ್ ಸಭೆ ಶುಕ್ರವಾರ ನಡೆಯಿತು. ಫೆಬ್ರುವರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮಾರ್ಚ್ 28-29ಕ್ಕೆ ಮುಂದೂಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಫೆಬ್ರುವರಿ 23-24 ರಂದು ರಾಷ್ಟ್ರವ್ಯಾಪಿ ಮುಷ್ಕರ ಆಯೋಜಿಸಲು ಕಾರ್ಮಿಕರ ರಾಷ್ಟ್ರೀಯ ಸಮಾವೇಶವು 2021ರ ನ.11ರಂದು ನಿರ್ಧರಿಸಿತ್ತು. ಅದಕ್ಕಾಗಿ ಹಲವು ರಾಜ್ಯಗಳಲ್ಲಿ ಸಿದ್ಧತೆಗಳೂ ನಡೆದಿದ್ದವು.

ADVERTISEMENT

ಆದರೆ, ಕೆಲ ರಾಜ್ಯಗಳಲ್ಲಿ ಕೋವಿಡ್‌ ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿನ ನಾಲ್ಕು ಹಂತಗಳ ಚುನಾವಣೆಯಲ್ಲದೇ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದೂಡಲಾಗಿದೆ. ಅದರಂತೆ ಮಾರ್ಚ್‌ 28-29 ರಂದು ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.

ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಐಎನ್‌ಟಿಯುಸಿ, ಎಐಟಿಯುಸಿ ಎಚ್‌ಎಂಎಸ್‌, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್‌, ಯುಟಿಯುಸಿ ಮತ್ತು ಸ್ವತಂತ್ರ ವಲಯವಾರು ಒಕ್ಕೂಟಗಳು/ಸಂಘಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.