ADVERTISEMENT

ಕೇಬಲ್‌, ಡಿಟಿಎಚ್‌ ಶುಲ್ಕಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 1:02 IST
Last Updated 3 ಜನವರಿ 2020, 1:02 IST
   

ಕೇಬಲ್ ಟಿ.ವಿ. ಮತ್ತು ಡೈರೆಕ್ಟ್‌ ಟು ಹೋಂ (ಡಿಟಿಎಚ್‌) ಸಂಪರ್ಕದಲ್ಲಿ, ಗ್ರಾಹಕ ತಾನು ವೀಕ್ಷಿಸುವ ವಾಹಿನಿಗೆ ಮಾತ್ರ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) 2019ರ ಫೆಬ್ರುವರಿಯಲ್ಲಿ ಜಾರಿಗೆ ತಂದಿತ್ತು.

ಗ್ರಾಹಕರ ಮೇಲಿನ ಶುಲ್ಕದ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಆದರೆ ಶುಲ್ಕದ ಹೊರೆ ವಿಪರೀತ ಏರಿಕೆ ಆಗಿತ್ತು ಎಂಬ ಆರೋಪ ಇತ್ತು. ಹೀಗಾಗಿ ಈ ವ್ಯವಸ್ಥೆಯ ನಿಯಮಗಳನ್ನು ಟ್ರಾಯ್ ಪರಿಷ್ಕರಿಸಿದೆ. ನೂತನ ನಿಯಮಗಳು 2020ರ ಮಾರ್ಚ್‌ 1ರಿಂದ ಜಾರಿಯಾಗಲಿವೆ.

₹153ಕ್ಕೆ 200 ವಾಹಿನಿಗಳು
* ಈಗ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಕೇಬಲ್ ಸಂಪರ್ಕ ಮತ್ತು ಡಿಟಿಎಚ್‌ ಸಂಪರ್ಕ ಹೊಂದಿರುವ ಗ್ರಾಹಕ, ಪ್ರತಿ ಸಂಪರ್ಕಕ್ಕೆ ₹ 153 (₹ 130 ಶುಲ್ಕ+ ₹ 23 ಜಿಎಸ್‌ಟಿ) ಶುಲ್ಕ ಪಾವತಿಸಬೇಕು. ಈ ಮೊತ್ತಕ್ಕೆ ಗ್ರಾಹಕ 100 ವಾಹಿನಿಗಳನ್ನು ಪಡೆಯಬಹುದು. ಇದರಲ್ಲಿ ದೂರದರ್ಶನದ 25 ವಾಹಿನಿಗಳು ಮತ್ತು 75 ಉಚಿತ ವಾಹಿನಿಗಳನ್ನು ಪಡೆಯಬಹುದು.

ADVERTISEMENT

‘ಪೇ ಚಾನೆಲ್‌’ಗಳು...
ಪೇ ಚಾನೆಲ್‌ಗಳ ಮೇಲಿನ ಶುಲ್ಕಕ್ಕೆ ಕಡಿವಾಣ ಹಾಕಲಾಗಿದೆ. ಗ್ರಾಹಕ ತಾನೇ ರೂಪಿಸಿಕೊಳ್ಳುವ ‘ಪೇ ಚಾನೆಲ್‌’ಗಳ ಗುಚ್ಛದ ಒಟ್ಟು ಶುಲ್ಕದ ಮೇಲೆ ಮಿತಿ ಹೇರಲಾಗಿದೆ.

ಯಾವುದೇ ಗುಚ್ಛದಲ್ಲಿನ ಒಂದು ‘ಪೇ ಚಾನೆಲ್‌’ ಅನ್ನು ಗ್ರಾಹಕ ಆಯ್ಕೆ ಮಾಡಿಕೊಳ್ಳುತ್ತಾನೆ. ಆಗ ಗ್ರಾಹಕನು ತಾನು ಆಯ್ಕೆ ಮಾಡಿಕೊಂಡ ‘ಪೇ ಚಾನೆಲ್‌’ಗೆ ಪಾವತಿಸುವ ಶುಲ್ಕವು, ಗುಚ್ಛದ ಪ್ರತಿ ಚಾನೆಲ್‌ನ ಸರಾಸರಿ ಶುಲ್ಕದ ಮೂರು ಪಟ್ಟನ್ನು ಮೀರಬಾರದು

ಉದಾಹರಣೆಗೆ: ಕ್ರೀಡಾ ವಾಹಿನಿಗಳ ಗುಚ್ಛದ ಮೊತ್ತ ₹ 30 ಆಗಿದ್ದು, ಅದರಲ್ಲಿ 10 ವಾಹಿನಿಗಳು ಲಭ್ಯವಿದ್ದರೆ, ಪ್ರತಿ ವಾಹಿನಿಯ ಶುಲ್ಕ ₹ 3 ಆಗುತ್ತದೆ. ಈ ಗುಚ್ಛದಲ್ಲಿ ಗ್ರಾಹಕ ಒಂದು ವಾಹಿನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಆಗ ಆ ವಾಹಿನಿಗೆ ಕಂಪನಿಯು ₹ 12ಕ್ಕಿಂತ ಹೆಚ್ಚು ಶುಲ್ಕವನ್ನು ವಿಧಿಸುವಂತಿಲ್ಲ.

ಗುಚ್ಛದಲ್ಲಿ ನೀಡಲಾಗುವ ಯಾವುದೇ ವಾಹಿನಿಯ ಶುಲ್ಕವು ₹ 12 ಮೀರುವಂತಿಲ್ಲ.

ರಿಯಾಯಿತಿ...
ಈ ಹಿಂದಿನ ನಿಯಮದಲ್ಲಿ ದೀರ್ಘಾವಧಿ ಚಂದಾದಾರಿಕೆಗೆ ರಿಯಾಯಿತಿ ನೀಡುವುದಕ್ಕೆ ನಿರ್ಬಂಧವಿತ್ತು. ಈಗ ಈ ನಿರ್ಬಂಧವನ್ನು ತೆಗೆಯಲಾಗಿದೆ. ಆರು ತಿಂಗಳು ಮತ್ತು ಅದಕ್ಕಿಂತಲೂ ಹೆಚ್ಚು ಅವಧಿಗೆ ಚಂದಾದಾರಿಕೆ ಪಡೆದ ಗ್ರಾಹಕರಿಗೆ ಸೇವಾ ಕಂಪನಿಗಳು ರಿಯಾಯಿತಿ ನೀಡಲು ನೂತನ ನಿಯಮಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ

ಬಹುಸಂಪರ್ಕ ಶುಲ್ಕಕ್ಕೆ ಶೇ 40ರ ಮಿತಿ
ಒಬ್ಬನೇ ಗ್ರಾಹಕ, ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಿ.ವಿ.ಗಳಿಗೆ ಸಂಪರ್ಕ ಪಡೆದಿದ್ದ ಸಂದರ್ಭದಲ್ಲಿ ಈ ನಿಯಮ ಅನ್ವಯವಾಗುತ್ತದೆ. ಎರಡನೇ ಟಿ.ವಿ.ಗೆ ಪಡೆದಿರುವ ಸಂಪರ್ಕದ ಶುಲ್ಕವು, ಮೊದಲ ಟಿ.ವಿ.ಗೆ ಪಡೆದಿರುವ ಸಂಪರ್ಕದ ಶುಲ್ಕದ ಶೇ 40ರಷ್ಟನ್ನು ಮೀರುವಂತಿಲ್ಲ.

* ದೂರದರ್ಶನದ 25 ಕಡ್ಡಾಯ ವಾಹಿನಿಗಳನ್ನು ಈ 200 ವಾಹಿನಿಗಳ ಪಟ್ಟಿಯಲ್ಲಿ ಸೇರಿಸುವಂತಿಲ್ಲ. ಆದರೆ, ಈ ವಾಹಿನಿಗಳನ್ನು ಯಾವ ಪ್ಯಾಕೇಜ್‌ ಅಡಿ ನೀಡಲಾಗುತ್ತದೆ ಎಂಬುದನ್ನು ಟ್ರಾಯ್ ಸ್ಪಷ್ಟಪಡಿಸಿಲ್ಲ

* ಆಪರೇಟರ್‌ ತನ್ನಲ್ಲಿ ಲಭ್ಯವಿರುವ ಎಲ್ಲಾ ಉಚಿತ ಚಾನೆಲ್‌ಗಳನ್ನು ಗ್ರಾಹಕರಿಗೆ ನೀಡಿದರೆ, ಪ್ರತಿ ಸಂಪರ್ಕಕ್ಕೆ ವಿಧಿಸುವ ಶುಲ್ಕ ₹ 160 (₹ 153 ಕನಿಷ್ಠ ಶುಲ್ಕ ಸೇರಿ) ಮೀರುವಂತಿಲ್ಲ.

(ಈ ಹಿಂದಿನ ನಿಯಮದಲ್ಲಿ ಹೆಚ್ಚುವರಿ 25 ಉಚಿತ ವಾಹಿನಿಗಳಿಗೆ ₹ 20 ಸೇವಾ ಶುಲ್ಕ ನೀಡಬೇಕಿತ್ತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.