ADVERTISEMENT

ದೆಹಲಿಯಿಂದ ಕರ್ನಾಟಕದತ್ತ ಹೊರಟ ‘ಶ್ರಮಿಕ ವಿಶೇಷ’ ರೈಲು

ಸಿದ್ದಯ್ಯ ಹಿರೇಮಠ
Published 15 ಮೇ 2020, 3:16 IST
Last Updated 15 ಮೇ 2020, 3:16 IST
ದೆಹಲಿ ರೈಲು ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲು ಸಿದ್ಧವಾಗಿ ನಿಂತಿರುವ ರೈಲು
ದೆಹಲಿ ರೈಲು ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲು ಸಿದ್ಧವಾಗಿ ನಿಂತಿರುವ ರೈಲು   

ನವದೆಹಲಿ: ಲಾಕ್ ಡೌನ್ ಸಂದರ್ಭ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಸಿಲುಕಿದ್ದ ಕರ್ನಾಟಕದ ವಲಸೆ ಕಾರ್ಮಿಕರು, ಪ್ರವಾಸಿಗರು ಮತ್ತು ಕನ್ನಡದ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರದ‌ ಮನವಿಯ ಮೇರೆಗೆ ಏರ್ಪಾಡು ಮಾಡಿರುವ 'ಶ್ರಮಿಕ ವಿಶೇಷ' ರೈಲು ಇಲ್ಲಿನ ಹಳೆ ದೆಹಲಿ ನಿಲ್ದಾಣದಿಂದ ಗುರುವಾರ ರಾತ್ರಿ 10 ಗಂಟೆಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.

'ಸೇವಾ ಸಿಂಧು' ಸಹಾಯವಾಣಿಯಲ್ಲಿ ನೋಂದಣಿ ಮಾಡಿಕೊಂಡಿದ್ದ 1,300 ಜನರ‌ ಪೈಕಿ ಆರೋಗ್ಯ ತಪಾಸಣೆಗೆ ಒಳಗಾದ 960 ಜನರನ್ನು ಕರ್ನಾಟಕ‌ ಭವನದ ಸಿಬ್ಬಂದಿ ಬೀಳ್ಕೊಟ್ಟರು.

ಒಟ್ಟು 60 ಗಂಟೆ‌ ಪ್ರಯಾಣದ ಈ ವಿಶೇಷ ರೈಲು ಮೀರಜ್, ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಯನ್ನು ತಲುಪಲಿದೆ. ಮುಂಬೈ ಕರ್ನಾಟಕ‌ ಭಾಗದ ಪ್ರಯಾಣಿಕರು ಹುಬ್ಬಳ್ಳಿ ನಿಲ್ದಾಣದಲ್ಲಿ ಇಳಿಯಲಿದ್ದು, ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.

ADVERTISEMENT

ಹುಬ್ಬಳ್ಳಿಯಿಂದ ಹೊರಟು ಗದಗ, ಬಾಗಲಕೋಟೆ, ವಿಜಯಪುರ ಮಾರ್ಗವಾಗಿ ರೈಲು ಕಲಬುರ್ಗಿ ತಲುಪಲಿದೆ. ಹೈದರಾಬಾದ್ ಕರ್ನಾಟಕ ಭಾಗದ ಜನರನ್ನು ಅಲ್ಲಿ ಇಳಿಸಿದ ನಂತರ ರೈಲು ಮಿಕ್ಕವರನ್ನು ಬೆಂಗಳೂರಿಗೆ ಕರೆದೊಯ್ಯಲಿದೆ.

ಎಲ್ಲ ಪ್ರಯಾಣಿಕರೂ ಕ್ವಾರಂಟೈನ್‌ ಷರತ್ತಿಗೆ ಒಳಪಟ್ಟು ಇಲ್ಲಿಂದ ಪ್ರಯಾಣ ಬೆಳೆಸಿದ್ದಾರೆ ಎಂದು ಕರ್ನಾಟಕ ಭವನದ ಲೈಸನಿಂಗ್ ಅಧಿಕಾರಿ ರೇಣುಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.

ಕಳೆದ ಮಂಗಳವಾರವಷ್ಟೇ ರಾಜಧಾನಿ ಮಾದರಿಯ ವಿಶೇಷ ರೈಲಿನಲ್ಲಿ ಕೆಲವರು ತೆರಳಿದ್ದರಿಂದ ನೋಂದಣಿ ಮಾಡಿಸಿಕೊಂಡ ಎಲ್ಲ ಪ್ರಯಾಣಿಕರು 'ಶ್ರಮಿಕ ವಿಶೇಷ' ರೈಲಿಗೆ ಬಂದಿರಲಿಲ್ಲ. ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಮನವಿಯ ಮೇರೆಗೆ ಕರ್ನಾಟಕ‌ ಸರ್ಕಾರ ಈ ರೈಲು ಪ್ರಯಾಣದ ಏರ್ಪಾಡು ಮಾಡಿದ್ದು, ಎಲ್ಲ ವೆಚ್ಚವನ್ನು ಭರಿಸಲಿದೆ.

ಲಾಕ್ ಡೌನ್‌ ಘೋಷಿಸಿದ್ದರಿಂದ ಅಲ್ಲಲ್ಲಿ ಸಿಲುಕಿದ್ದವರು ಇದೀಗ ತಮ್ಮ ಊರುಗಳತ್ತ ಮುಖ‌ಮಾಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.