ಅಗರ್ತಲಾ: ತೃಣಮೂಲ ಕಾಂಗ್ರೆಸ್ ನಾಯಕರು ಅಗರ್ತಲಾ ವಿಮಾನ ನಿಲ್ದಾಣಕ್ಕೆ ಬಂದರೆ ತಾಲಿಬಾನಿ ಶೈಲಿಯಲ್ಲಿ ದಾಳಿ ಮಾಡಬೇಕು ಎಂದು ಹೇಳುವ ಮೂಲಕ ತ್ರಿಪುರಾದ ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕ ಅರುಣ್ ಚಂದ್ರ ಭೌಮಿಕ್ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.
ಇದು ಕೇವಲ ಶಾಸಕರ ಅಭಿಪ್ರಾಯವಾಗಿದೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಥಳೀಯ ಬಿಜೆಪಿ ಘಟಕ ತಿಳಿಸಿದೆ.
2023ರ ತ್ರಿಪುರಾ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಪ್ರಮುಖ ನಾಯಕರು, ಗುಡ್ಡಗಾಡು ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ. ಪಕ್ಷದ ಸಂಘಟನೆಗೆ ಪ್ರಯತ್ನಿಸುತ್ತಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅರುಣ್ ಚಂದ್ರ ಭೌಮಿಕ್, 25 ವರ್ಷಗಳ ಸುದೀರ್ಘ ಕಮ್ಯುನಿಸ್ಟ್ ಆಡಳಿತವನ್ನು ಕೊನೆಗೊಳಿಸುವ ಮೂಲಕ ಅಧಿಕಾರಕ್ಕೆ ಬಂದ ತ್ರಿಪುರಾದ ಬಿಪ್ಲವ್ ಕುಮಾರ್ ದೇವ್ ನೇತೃತ್ವದ ಸರ್ಕಾರಕ್ಕೆ ಟಿಎಂಸಿ ಹಾನಿ ಮಾಡಲು ಪ್ರಯತ್ನಿಸುತ್ತಿದೆ. ಇವೆಲ್ಲವೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಪ್ರೇರಣೆಯಿಂದ ನಡೆಯುತ್ತಿದೆ ಎಂದು ಬೆಲೋನಿಯಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಹೇಳಿದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾದ ಪ್ರತಿಮಾ ಭೌಮಿಕ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ‘ತಾಲಿಬಾನಿ ಶೈಲಿಯಲ್ಲಿ ನಾವು ಅವರ ಮೇಲೆ ದಾಳಿ ಮಾಡಬೇಕೆಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಅವರು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ನಾವು ಅವರ ಮೇಲೆ ದಾಳಿ ನಡೆಸಬೇಕು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.