ಹೈದರಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ಆರ್ಥಿಕ ನೀತಿಗಳು ಜಾಗತಿಕ ಆರ್ಥಿಕ ಪ್ರವೃತ್ತಿಗಳನ್ನು ನಿಶ್ಚಲಗೊಳಿಸಿರುವುದು ಮಾತ್ರವಲ್ಲ, ಉತ್ತರ ಅಮೆರಿಕ ದೇಶಕ್ಕೂ ‘ಸ್ವಯಂ ವಿನಾಶಕಾರಿ’ಯಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ.ರಂಗರಾಜನ್ ಶುಕ್ರವಾರ ಆತಂಕ ವ್ಯಕ್ತಪಡಿಸಿದ್ದಾರೆ.
ಉನ್ನತ ಶಿಕ್ಷಣ ಕ್ಷೇತ್ರದ ಐಸಿಎಫ್‌ಎಐ ಫೌಂಡೇಷನ್‌ನ 15ನೇ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ‘ಮುಕ್ತ ವ್ಯಾಪಾರ ಹೊಂದಿರುವ ವಿವಿಧ ದೇಶಗಳ ಗುಂಪುಗಳ ಹೊರಹೊಮ್ಮುವಿಕೆ ಇಂದು ಅನಿವಾರ್ಯವಾಗಿದೆ. ಇದರ ಅಂತಿಮ ಗುರಿಯು ಮುಕ್ತ ವ್ಯಾಪಾರ ಕೇಂದ್ರೀಕರಿಸುವ ವಿಶಾಲ ಜಗತ್ತನ್ನು ಹೊಂದುವುದು ಆಗಿರಬೇಕು’ ಎಂದು ‘ಬ್ರಿಕ್ಸ್’ ಹೆಸರು ಪ್ರಸ್ತಾಪಿಸದೇ ಅವರು ಹೇಳಿದರು.
‘ಜಗತ್ತು ಇಂದು ಬದಲಾವಣೆಯ ಸ್ಥಿತಿಯಲ್ಲಿದೆ. ಟ್ರಂಪ್ ಅವರ ಕೆಲ ನೀತಿಗಳು ವಿಶ್ವ ವ್ಯಾಪಾರಕ್ಕೆ ತಡೆಯೊಡ್ಡಿವೆ. ಭಾರತವು ಈ ಬೆಳವಣಿಗೆಯಿಂದ ಕೆಟ್ಟ ಪರಿಣಾಮ ಎದುರಿಸುತ್ತಿದೆ. ತಮ್ಮ ನೀತಿಗಳು ತಮಗೇ ವಿನಾಶಕಾರಿಯಾಗಿವೆ ಎಂದು ಅಮೆರಿಕದ ನೀತಿ ನಿರೂಪಕರು ಅರ್ಥ ಮಾಡಿಕೊಳ್ಳಲಿದ್ದಾರೆ’ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಮಾಜಿ ಮುಖ್ಯಸ್ಥರೂ ಆಗಿರುವ ಅವರು ಅಭಿಪ್ರಾಯಪಟ್ಟರು.
‘ವಿಕಸಿತ ಭಾರತದ ಕಲ್ಪನೆ ಅಂಕಿಸಂಖ್ಯೆಗಳ ಗುರಿಯಾಗಬಾರದು. ಸರ್ಕಾರ ಮತ್ತು ಸಮಾಜದ ಸಂಘಟಿತ ಪ್ರಯತ್ನದ ಪರಿವರ್ತನೆಯ ಪ್ರಯಾಣವಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.