ADVERTISEMENT

ಇಡೀ ದಿನ ನಮ್ಮ ಕುಟುಂಬವನ್ನು ಗೃಹಬಂಧನದಲ್ಲಿರಿಸಲಾಗಿತ್ತು: ಒಮರ್‌ ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 18:11 IST
Last Updated 14 ಫೆಬ್ರುವರಿ 2021, 18:11 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಶ್ರೀನಗರ: ‘ಭಾನುವಾರ ಇಡೀ ದಿನ ನಮ್ಮ ಕುಟುಂಬವನ್ನು ಗೃಹಬಂಧನದಲ್ಲಿರಿಸಲಾಗಿತ್ತು’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಆರೋಪಿಸಿದ್ದಾರೆ.

ಆದರೆ, ಈ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಜಮ್ಮು ಕಾಶ್ಮೀರ ಪೊಲೀಸ್‌ ಇಲಾಖೆಯು, ‘ಇದು ಗೃಹಬಂಧನವಾಗಿರಲಿಲ್ಲ, ಪುಲ್ವಾಮಾ ಘಟನೆಯ ಎರಡನೇ ವಾರ್ಷಿಕ ದಿನವಾಗಿದ್ದರಿಂದ ಎಲ್ಲಾ ನಾಯಕರ ಸಂಚಾರವನ್ನು ನಿರ್ಬಂಧಿಸಲಾಗಿತ್ತು ಮತ್ತು ಆ ಕುರಿತ ಮಾಹಿತಿಯನ್ನು ಮೊದಲೇ ಅವರಿಗೆ ನೀಡಲಾಗಿತ್ತು’ ಎಂದಿದೆ.

‘ಇದು ಹೊಸ ಜಮ್ಮು ಮತ್ತು ಕಾಶ್ಮೀರ, 2019ರ ನಂತರ ಯಾವುದೇ ವಿವರಣೆ ನೀಡದೆಯೇ ನಮ್ಮನ್ನು ಗೃಹಬಂಧನದಲ್ಲಿಡಲಾಗುತ್ತಿದೆ. ನನ್ನನ್ನು ಮತ್ತು ನನ್ನ ತಂದೆಯನ್ನು (ಹಾಲಿ ಸಂಸದ) ಬಂಧಿಸಿದ್ದಾರೆ. ನನ್ನ ಸಹೋದರಿ ಹಾಗೂ ಅವರ ಮಕ್ಕಳನ್ನೂ ಅವರ ಮನೆಯಲ್ಲೇ ಬಂಧನದಲ್ಲಿಡಲಾಗಿದೆ. ಮನೆಯ ಕೆಲಸಗಾರರನ್ನೂ ಒಳಗೆ ಬಿಟ್ಟಿಲ್ಲ. ಹೀಗಿದ್ದೂ ನಾನು ಸಿಟ್ಟಾಗಿದ್ದು ನಿಮಗೆ ಅಚ್ಚರಿ ಎನಿಸಿದೆ..., ನಡೆಸಿ ನಿಮ್ಮ ಹೊಸ ಮಾದರಿಯ ಪ್ರಜಾತಂತ್ರವನ್ನು’ ಎಂದು ಒಮರ್‌ ಅವರು ಭಾನುವಾರ ಟ್ವೀಟ್‌ ಮಾಡಿದ್ದರು. ಜತೆಗೆ ಅವರ ಗುಪ್ಕಾರ್‌ ಮನೆಯ ಸುತ್ತ ಸಶಸ್ತ್ರ ಪೊಲೀಸರು ನಿಂತಿರುವ ಚಿತ್ರವನ್ನೂ ಟ್ಯಾಗ್‌ ಮಾಡಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸರು, ‘ಇಂದು ಪುಲ್ವಾಮಾ ಘಟನೆಯ ಎರಡನೇ ವಾರ್ಷಿಕ ದಿನ ಆಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಎಚ್ಚರ ವಹಿಸಲಾಗಿದೆ. ಕೆಲವು ವ್ಯತಿರಿಕ್ತವಾದ ಮಾಹಿತಿಗಳು ಬಂದಿರುವುದರಿಂದ, ಪ್ರಮುಖ ಹಾಗೂ ಸಂರಕ್ಷಿತ ವ್ಯಕ್ತಿಗಳ ಓಡಾಟವನ್ನು ತಡೆಯಲಾಗಿದೆ. ಸಂಬಂಧಪಟ್ಟವರಿಗೆ ಆ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು’ ಎಂದು ಟ್ವೀಟ್‌ ಮಾಡಿದ್ದರು.

ಇದಾದ ನಂತರ ಪೊಲೀಸರಿಗೆ ಸವಾಲು ಹಾಕಿದ ಒಮರ್‌, ‘ನನಗೆ ಅಂಥ ಮಾಹಿತಿ ನೀಡಿರುವ ಮತ್ತು ಅದಕ್ಕೆ ನಾನು ಅಥವಾ ನನ್ನ ಕಚೇರಿಯು ಸ್ವೀಕೃತಿ ನೀಡಿರುವುದಕ್ಕೆ ದಾಖಲೆಗಳಿದ್ದರೆ ಇಲ್ಲಿಯೇ ಬಹಿರಂಗಪಡಿಸಿ’ ಎಂದು ಟ್ವೀಟ್‌ ಮಾಡಿದರು.

ಸ್ವಲ್ಪವೇ ಸಮಯದಲ್ಲಿ ಪೊಲೀಸರು ಒಮರ್‌ ಅಬ್ಲುಲ್ಲಾ ಅವರಿಗೆ ಕಳುಹಿಸಿದ್ದ ಎರಡು ಪತ್ರಗಳ ಪ್ರತಿಗಳನ್ನು ಟ್ವಿಟರ್‌ ಮೂಲಕ ಬಹಿರಂಗಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.