ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೋಲ್ ಅರಣ್ಯದಲ್ಲಿ ಉಗ್ರರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತೀಯ ಸೇನೆಯ ಇಬ್ಬರು ಪ್ಯಾರಾ ಕಮಾಂಡೊಗಳು ನಾಪತ್ತೆಯಾಗಿದ್ದಾರೆ.
ಮಂಗಳವಾರ ರಾತ್ರಿಯಿಂದ ಇವರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧಕಾರ್ಯ ಚುರುಕುಗೊಳಿಸಲಾಗಿದೆ.
ಭಯೋತ್ಪಾದಕ ಚಟುವಟಿಕೆ ಕುರಿತ ಗುಪ್ತಚರ ಮಾಹಿತಿ ಆಧಾರದಲ್ಲಿ ಶೋಧ ಕಾರ್ಯಾಚರಣೆಯನ್ನು ಮಂಗಳವಾರ ಆರಂಭಿಸಲಾಗಿತ್ತು. ಈ ಸೈನಿಕರು ಕಾರ್ಯಾಚರಣೆಯ ಭಾಗವಾಗಿದ್ದರು. ಭಾರಿ ಮಳೆ ಇದ್ದಿದ್ದರಿಂದ ಕಾರ್ಯಾಚರಣೆಗೆ ಅಡಚಣೆಯುಂಟಾಗಿತ್ತು. ಈ ಮಧ್ಯೆ ಇಬ್ಬರು ಕಮಾಂಡೊಗಳು ಸಂಪರ್ಕ ಕಡಿದುಕೊಂಡಿದ್ದಾರೆ.
‘ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಮತ್ತು ಡ್ರೋನ್ ಬಳಸಿ ಶೋಧ ನಡೆಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು. ಪ್ರತಿಕೂಲ ಹವಾಮಾನದ ಕಾರಣದಿಂದ ಅವರು ಸಂಪರ್ಕ ಕಳೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.