ADVERTISEMENT

ಕೋಚಿಂಗ್‌ ಸೆಂಟರ್‌ನಲ್ಲಿ ಕುರ್ಚಿಗಳ ಬದಲು ಟೈರ್‌ಗಳು

ಸೂರತ್‌: ಅವಘಡ ಸ್ಥಳದಿಂದ ದೂರವಿದ್ದ ಅಗ್ನಿಶಾಮಕ ವಾಹನ

ಪಿಟಿಐ
Published 26 ಮೇ 2019, 17:21 IST
Last Updated 26 ಮೇ 2019, 17:21 IST
   

ಗಾಂಧಿನಗರ: ’ಸೂರತ್‌ನಲ್ಲಿ ಬೆಂಕಿ ದುರಂತ ಸಂಭವಿಸಿದ ಕೋಚಿಂಗ್‌ ಸೆಂಟರ್‌ನಲ್ಲಿ ಟೈರ್‌ಗಳನ್ನು ಕುರ್ಚಿ ರೀತಿ ಬಳಸಲಾಗಿತ್ತು. ಇದರಿಂದಾಗಿ ಬೆಂಕಿ ಜ್ವಾಲೆಗಳು ಅತಿ ವೇಗದಲ್ಲಿ ವ್ಯಾಪಿಸಿ ದೊಡ್ಡ ಅವಘಡಕ್ಕೆ ಕಾರಣವಾಯಿತು’ ಎಂದು ಗುಜರಾತ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೆ.ಎನ್‌. ಸಿಂಗ್‌ ತಿಳಿಸಿದ್ದಾರೆ.

‘ಕಟ್ಟಡದಲ್ಲಿ ಫ್ಲೆಕ್ಸ್‌, ಟೈರ್‌ಗಳು ಸೇರಿದಂತೆ ಶೀಘ್ರ ದಹನವಾಗುವ ವಸ್ತುಗಳಿದ್ದವು. ಜತೆಗೆ, ಅಗ್ನಿಶಾಮಕ ವಾಹನಗಳು ದೂರವಿದ್ದವು. ಇದರಿಂದ ರಕ್ಷಣಾ ಕಾರ್ಯ ವಿಳಂಬವಾಯಿತು’ ಎಂದು ತಿಳಿಸಿದ್ದಾರೆ.

‘ಬೆಂಕಿಯು ಅತಿ ವೇಗದಲ್ಲಿ ಹಬ್ಬಿದೆ. ಕೋಚಿಂಗ್‌ ಸೆಂಟರ್‌ನ ಛಾವಣಿ ಕೇವಲ ಐದು ಅಡಿ ಎತ್ತರದಲ್ಲಿತ್ತು. ಇಂತಹ ಕೊಠಡಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗುವುದರಿಂದ ಕೋಚಿಂಗ್‌ ಸೆಂಟರ್‌ನ ಮಾಲೀಕ ಟೈರ್‌ಗಳನ್ನು ಬಳಸಿದ್ದ’ ಎಂದು ತಿಳಿಸಿದ್ದಾರೆ.

ADVERTISEMENT

‘ಅತಿ ಹೆಚ್ಚಿನ ಸಾಮರ್ಥ್ಯದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ. ಅವೆಲ್ಲವು ದೂರದಲ್ಲಿದ್ದವು. ಬೆಂಕಿ ದುರಂತದ ಸ್ಥಳಕ್ಕೆ ಆಗಮಿಸಲು ಸುಮಾರು 45 ನಿಮಿಷ ತೆಗೆದುಕೊಂಡವು. ಈ ಅವಧಿಯಲ್ಲಿ ಹಲವು ವಿದ್ಯಾರ್ಥಿಗಳು ಜೀವ ಕಳೆದುಕೊಂಡರು’ ಎಂದು ವಿವರಿಸಿದ್ದಾರೆ.

‘ಕರ್ತವ್ಯ ನಿರ್ಲಕ್ಷ್ಯದ ಕಾರಣಕ್ಕೆ ಸೂರತ್‌ ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳಾದ ಎಸ್‌.ಕೆ. ಆಚಾರ್ಯ ಮತ್ತು ಕೀರ್ತಿ ಮೊದ್‌ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಸಿಂಗ್‌ ಮಾಹಿತಿ ನೀಡಿದ್ದಾರೆ.

ಬೆಂಕಿ ದುರಂತದ ಹಿನ್ನೆಲೆಯಲ್ಲಿ ಎಲ್ಲ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳ ತಪಾಸಣೆಯನ್ನು ಎಲ್ಲ ಮುನ್ಸಿಪಾಲಿಟಿಗಳು ಮತ್ತು ನಗರ ಪಾಲಿಕೆಗಳು ಕೈಗೊಂಡಿವೆ. ತಪಾಸಣೆಗಾಗಿಯೇ 713 ತಂಡಗಳನ್ನು ರಚಿಸಲಾಗಿದೆ.

ಈಗಾಗಲೇ ಕೋಚಿಂಗ್‌ ಸೆಂಟರ್‌ ನಡೆಸುತ್ತಿದ್ದ ಸುಮಾರು 9,900 ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, 9,300 ಮಂದಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಕಟ್ಟಡಗಳಲ್ಲಿ ಶೀಘ್ರದಲ್ಲೇ ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸದಿದ್ದರೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.