ADVERTISEMENT

ಎನ್‌ಡಿಎಯನ್ನು ಅಮೀಬಾಕ್ಕೆ ಹೋಲಿಸಿದ ಉದ್ಧವ್‌ ಠಾಕ್ರೆ

ಪಿಟಿಐ
Published 27 ಆಗಸ್ಟ್ 2023, 15:28 IST
Last Updated 27 ಆಗಸ್ಟ್ 2023, 15:28 IST
ಉದ್ಧವ್‌ ಠಾಕ್ರೆ ಪಿಟಿಐ ಚಿತ್ರ 
ಉದ್ಧವ್‌ ಠಾಕ್ರೆ ಪಿಟಿಐ ಚಿತ್ರ    

ಹಿಂಗೋಲಿ (ಪಿಟಿಐ): ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಭಾನುವಾರ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಅಮೀಬಾಕ್ಕೆ ಹೋಲಿಸಿದ್ದಾರೆ. ಈ ಮೈತ್ರಿಕೂಟಕ್ಕೆ ನಿರ್ದಿಷ್ಟ ಆಕಾರ, ಗಾತ್ರವೇ ಇಲ್ಲ ಎಂದು ಗೇಲಿ ಮಾಡಿದ್ದಾರೆ. 

ಮಹಾರಾಷ್ಟ್ರದ ಹಿಂಗೋಲಿಯಲ್ಲಿನ ರ್‍ಯಾಲಿಯಲ್ಲಿ ಠಾಕ್ರೆ ಮಾತನಾಡಿದರು. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವನ್ನು ‘ಘಮಾಂಡಿಯಾ’ (ಘಮಾಂಡಿ– ಅಹಂಕಾರಿ) ಮತ್ತು ‘ಇಂಡಿಯನ್ ಮುಜಾಹಿದ್ದೀನ್’ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ತರಾಟೆಗೆ ತೆಗೆದುಕೊಂಡರು. ಎನ್‌ಎಡಿಎಯನ್ನೇ ‘ಘಮ-ಎನ್‌ಡಿಎ’ ಎಂದು ಕರೆಯಬೇಕು ಎಂದು ಹೇಳಿದರು. 

ಮಹಾರಾಷ್ಟ್ರದಲ್ಲಿ ತನ್ನ ನೆಲೆ ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಿಆರ್‌ಎಸ್‌ಗೂ ಅವರು ಇದೇ ವೇಳೆ ಚಾಟಿ ಬೀಸಿದರು. ‘ತೆಲಂಗಾಣ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರು ‘ಇಂಡಿಯಾ’ವನ್ನು ಬೆಂಬಲಿಸುತ್ತಾರೋ ಅಥವಾ ಬಿಜೆಪಿಯನ್ನು ಬೆಂಬಲಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ನೀವು ದೇಶದೊಂದಿಗಿದ್ದರೆ, ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರಿಕೊಳ್ಳಿ. ಇಲ್ಲವಾದರೆ, ಬಿಜೆಪಿಯೊಂದಿಗಿನ ನಿಮ್ಮ ಮೈತ್ರಿಯನ್ನು ಬಹಿರಂಗವಾಗಿ ಘೋಷಿಸಿ. ಆದರೆ, ಮತಗಳನ್ನು ವಿಭಜಿಸಬೇಡಿ. ಎಲ್ಲಕ್ಕೂ ಮೊದಲು ಬಿಆರ್‌ಎಸ್‌ ಮೊದಲು ತನ್ನ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿಕೊಳ್ಳಲಿ’ ಎಂದೂ ಅವರು ವ್ಯಂಗ್ಯವಾಡಿದರು.

‘ಇಂಡಿಯಾ’ ಮೈತ್ರಿಯು ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಿಸಲು ಬಯಸುವ ರಾಷ್ಟ್ರೀಯವಾದಿ ಪಕ್ಷಗಳನ್ನು ಒಳಗೊಂಡಿದೆ. ಆದರೆ, ಎನ್‌ಡಿಎಯ ಬಹುತೇಕ ಪಕ್ಷಗಳು ದೇಶದ್ರೋಹಿಗಳನ್ನು ಒಳಗೊಂಡಿವೆ. ಪಕ್ಷಗಳನ್ನು ಒಡೆದವರನ್ನು ಬಿಜೆಪಿ ತನ್ನ ಮಿತ್ರಪಕ್ಷವನ್ನಾಗಿ ಮಾಡಿಕೊಂಡಿದೆ‘ ಎಂದು ಠಾಕ್ರೆ ಹೇಳಿದರು.

‘ಈಗಿನ ಎನ್‌ಡಿಎ ಅಮೀಬಾದಂತಿದೆ. ಅದಕ್ಕೆ ನಿರ್ದಿಷ್ಟ ಆಕಾರ, ಗಾತ್ರವೆಂಬುದೇ ಇಲ್ಲ. ‘ಇಂಡಿಯಾ’ ಮೈತ್ರಿಕೂಟವು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದೆ. ಎಲ್ಲ ಪಕ್ಷಗಳೂ ‘ಇಂಡಿಯಾ‘ ಸೇರಬೇಕು‘ ಎಂದು ಅವರು ಮನವಿ ಮಾಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.