ADVERTISEMENT

ಅನ್ಯರು ನಮಗೆ ಬುದ್ಧಿ ಹೇಳಬೇಕಿಲ್ಲ

ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಭಾರತದ ತೀವ್ರ ಆಕ್ಷೇಪ

ಪಿಟಿಐ
Published 16 ಆಗಸ್ಟ್ 2019, 19:43 IST
Last Updated 16 ಆಗಸ್ಟ್ 2019, 19:43 IST
   

ವಿಶ್ವಸಂಸ್ಥೆ : ‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರವು ಸಂಪೂರ್ಣ ಆಂತರಿಕವಾದುದು. ಅದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಅಂತರರಾಷ್ಟ್ರೀಯ ಸಮುದಾಯವು ಈ ಬಗ್ಗೆ ಚಿಂತಿಸುವುದು ಬೇಡ’ ಎಂದು ಭಾರತವು ಖಾರವಾಗಿ ಪ್ರತಿಕ್ರಿಯಿಸಿದೆ.

‘ನಮ್ಮಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅದನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ. ನಮ್ಮ ನ್ಯಾಯಾಲಯಗಳು ಆ ಬಗ್ಗೆ ಚರ್ಚಿಸುತ್ತವೆ ಮತ್ತು ಪರಿಹಾರ ನೀಡುತ್ತವೆ. ನಾವು ಹೇಗೆ ಬದುಕಬೇಕು ಎಂಬುದನ್ನು ಅಂತರರಾಷ್ಟ್ರೀಯ ಸಮುದಾಯವು ನಮಗೆ ಹೇಳಬೇಕಿಲ್ಲ. ನಾವು ನೂರು ಕೋಟಿಗೂ ಹೆಚ್ಚು ಜನರಿದ್ದೇವೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಅಸಿಂಧುಗೊಳಿಸಿದ ಭಾರತದ ನಿರ್ಧಾರ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಗೋಪ್ಯ ಸಭೆ ನಡೆಸಿದ ಬೆನ್ನಲ್ಲೇ ಭಾರತವು ಈ ಪ್ರತಿಕ್ರಿಯೆ ನೀಡಿದೆ. ಭದ್ರತಾ ಮಂಡಳಿಯ ಐವರು ಶಾಶ್ವತ ಸದಸ್ಯ ಮತ್ತು 10 ಸಾಮಾನ್ಯ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ನಡುವೆ ನಡೆದ ಈ ಸಭೆಯಲ್ಲಿ ಭಾರತವಾಗಲೀ, ಪಾಕಿಸ್ತಾನವಾಗಲೀ ಭಾಗಿಯಾಗಿರಲಿಲ್ಲ.

ADVERTISEMENT

ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಭದ್ರತಾ ಮಂಡಳಿಯು ಇಂತಹ ಸಭೆ ನಡೆಸಿದ್ದು, ಐವತ್ತು ವರ್ಷಗಳಲ್ಲಿ ಇದೇ ಮೊದಲು.ಇದು ಗೋಪ್ಯ ಸಭೆಯಾಗಿರುವ ಕಾರಣ ಚರ್ಚೆಯ ವಿಷಯವು ಬಹಿರಂಗವಾಗುವುದಿಲ್ಲ. ಆದರೆ ಸಭೆಗೂ ಮುನ್ನ ರಷ್ಯಾ ಪ್ರತಿನಿಧಿ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಸಭೆಯ ನಂತರ ಚೀನಾ ತನ್ನ ಅಭಿಪ್ರಾಯವನ್ನು ಬಹಿರಂಗಪಡಿಸಿತ್ತು. ಪಾಕಿಸ್ತಾನವೂ ಈ ಬಗ್ಗೆ ಹೇಳಿಕೆ ನೀಡಿತ್ತು.

ಈ ಹೇಳಿಕೆಗಳ ನಂತರ ಭಾರತವು ಪ್ರತಿಕ್ರಿಯೆ ನೀಡಿದೆ.ಈ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯವು ಸಭೆ ನಡೆಸುವುದಕ್ಕೆ ಭಾರತವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.