ADVERTISEMENT

ಸಿಬಿಎಸ್‌ಇ ಪಠ್ಯಕ್ರಮದ ಮಾಹಿತಿ ಇಲ್ಲದೆ ಟೀಕೆ: ಸಚಿವ ರಮೇಶ ಪೋಖ್ರಿಯಾಲ್

ಪಿಟಿಐ
Published 9 ಜುಲೈ 2020, 8:45 IST
Last Updated 9 ಜುಲೈ 2020, 8:45 IST
ರಮೇಶ ಪೋಖ್ರಿಯಾಲ್‌ ನಿಶಾಂಕ್‌
ರಮೇಶ ಪೋಖ್ರಿಯಾಲ್‌ ನಿಶಾಂಕ್‌   

ನವದೆಹಲಿ: ಕೋವಿಡ್‌–19 ಕಾರಣ ನೀಡಿ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕೆಲವು ವಿಷಯಗಳನ್ನು ಕೈಬಿಟ್ಟಿರುವ ಬಗ್ಗೆ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ ಮಾನವ ಸಂಪನ್ಮೂಲ ಸಚಿವ ರಮೇಶ ಪೋಖ್ರಿಯಾಲ್‌ ನಿಶಾಂಕ್ ಅವರು ಸರ್ಕಾರದ‌ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಕೆಲವರು ಸರಿಯಾದ ಮಾಹಿತಿ ಇಲ್ಲದೇ ಟೀಕೆ ಮಾಡುತ್ತಿದ್ದಾರೆ. ಸರ್ಕಾರದ ಕ್ರಮದ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಈ ರೀತಿ ಟೀಕೆ ಮಾಡಲಾಗುತ್ತಿದೆ’ ಎಂದು ಅವರು ಗುರುವಾರ ಹೇಳಿದ್ದಾರೆ.

ಸಿಬಿಎಸ್‌ಇ ಪಠ್ಯಕ್ರಮದಿಂದ ‘ಪ್ರಜಾಪ್ರಭುತ್ವ’, ‘ಬಹುತ್ವ’ ಕುರಿತ ಪಾಠಗಳನ್ನು ಇತ್ತೀಚೆಗೆ ಸಚಿವಾಲಯ ಕೈಬಿಟ್ಟಿದ್ದಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು. ಒಂದು ನಿರ್ದಿಷ್ಟ ಸಿದ್ಧಾಂತವನ್ನು ಮಕ್ಕಳ ಮೇಲೆ ಹೇರುವ ಹುನ್ನಾರ ಅಡಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.

ADVERTISEMENT

‘ಸರ್ಕಾರದ ಕ್ರಮವನ್ನು ಟೀಕಿಸುತ್ತಿರುವವರ ಸಮಸ್ಯೆ ಏನೆಂದರೆ, ನಿರ್ದಿಷ್ಟ ವಿಷಯವನ್ನು ಕೈಗೆತ್ತಿಕೊಂಡು, ಅದನ್ನು ಭಾವನಾತ್ಮಕವಾಗಿ ಹೇಳುವ ಮೂಲಕ ಸತ್ಯವನ್ನು ಮರೆಮಾಚುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಸಚಿವ ಪೋಖ್ರಿಯಾಲ್‌ ತಿರುಗೇಟು ನೀಡಿದ್ದಾರೆ.

‘ಕೆಲವು ಪಾಠಗಳನ್ನು ತೆಗೆದುಹಾಕಿರುವುದು ಈಗಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮ ಮಾತ್ರ. ಶಾಲಾ ಅವಧಿಯೂ ಕಡಿತವಾಗಿರುವುದರಿಂದ ವಿದ್ಯಾರ್ಥಿಗಳ ಮೇಲೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ. ಶಿಕ್ಷಣದೊಂದಿಗೆ ರಾಜಕೀಯ ಬೆರಸಬಾರದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.