ADVERTISEMENT

ಕೇಂದ್ರದಿಂದ ರಾಜಧಾನಿ ನಿಯಂತ್ರಣ: ವಿಸ್ತೃತ ಪೀಠದ ವಿಚಾರಣೆ ಕೋರಿ ಸರ್ಕಾರ ಅರ್ಜಿ

ಪಿಟಿಐ
Published 5 ಡಿಸೆಂಬರ್ 2022, 13:37 IST
Last Updated 5 ಡಿಸೆಂಬರ್ 2022, 13:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಮೇಲಿನ ನಿಯಂತ್ರಣ ಕೇಂದ್ರ ಸರ್ಕಾರದಲ್ಲಿರಬೇಕೇ ಅಥವಾ ದೆಹಲಿ ಸರ್ಕಾರದಡಿಯೇ ಎಂಬ ವಿವಾದ ಕುರಿತ ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

ಕೇಂದ್ರದ ಈ ನಡೆಯನ್ನು ದೆಹಲಿ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ ಬಲವಾಗಿ ವಿರೋಧಿಸಿದರು. ‘ವಿಳಂಬಗೊಳಿಸುವ ಇಂತಹ ಕಾರ್ಯತಂತ್ರವನ್ನು ಸಹಿಸಲಾಗದು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಪೀಠಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ, ‘ಇಲ್ಲಿ, ವಿವಾದಗೊಳಿಸುವ ಯಾವುದೇ ಅಂಶಗಳಿಲ್ಲ. ದೆಹಲಿ–ಕೇಂದ್ರ ನಡುವಣ ಈ ವಿವಾದದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಲು ಕೋರಿ ನಾನು ಮಧ್ಯಂತರ ಅರ್ಜಿ ಸಲ್ಲಿಸುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ದೆಹಲಿಯಲ್ಲಿ ವಿವಿಧ ಸೇವೆಗಳ ನಿಯಂತ್ರಣ ಕುರಿತು ಕೇಂದ್ರ –ದೆಹಲಿ ನಡುವಣ ವಿವಾದವಾಗಿರುವ ಕಾರಣ ವಿಸ್ತೃತ ಪೀಠಕ್ಕೆ ಒಪ್ಪಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹಿಂದೆ ಆದೇಶಿಸಿತ್ತು. ಅದರ ಮರುಪರಿಶೀಲನೆ ಆಗಬೇಕಾಗುತ್ತದೆ ಎಂದೂ ಸಿಂಘ್ವಿ ಅವರು ಹೇಳಿದರು.

ಸಂವಿಧಾನ ಪೀಠ ಮತ್ತೆ ವಿಚಾರಣೆಗೆ ಸೇರಿದಾಗ ಈ ಮಧ್ಯಂತರ ಅರ್ಜಿ ಕುರಿತು ತೀರ್ಮಾನಿಸಲಿದೆ. ಆ ಸಂದರ್ಭದಲ್ಲಿ ಆಕ್ಷೇಪವನ್ನು ದಾಖಲಿಸಬಹುದು ಎಂದು ಇದಕ್ಕೆ ಪ್ರತಿಯಾಗಿ ಸಿಂಘ್ವಿ ಅವರಿಗೆ ಸಿಜೆಐ ತಿಳಿಸಿದರು.

ಐವರು ಸದಸ್ಯರ ಸಂವಿಧಾನ ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರ ಆರೋಗ್ಯ ಸರಿ ಇಲ್ಲ ಎಂದು ಮಾಹಿತಿ ನೀಡಿದ ಸಿಜೆಐ ಅವರು, ಡಿ.6ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡುವ ಇಂಗಿತವನ್ನು ವ್ಯಕ್ತಪಡಿಸಿದರು.

ದೆಹಲಿಯಲ್ಲಿನ ಸೇವೆಗಳ ನಿಯಂತ್ರಣ ಕುರಿತಂತೆ ಕೇಂದ್ರ ಸರ್ಕಾರ ಮತ್ತು ದೆಹಲಿಯ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಶಾಸಕಾಂಗ ಮತ್ತು ಕಾರ್ಯಾಗದ ಅಧಿಕಾರ ವ್ಯಾಪ್ತಿ ಕುರಿತ ಅರ್ಜಿಯ ವಿಚಾರಣೆಯನ್ನು ಐವರು ಸದಸ್ಯರ ಸಂವಿಧಾನ ಪೀಠವು ಡಿ.6ರಂದು ನಡೆಸಬೇಕಾಗಿತ್ತು.

ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಅವರು, ‘ಲೆಫ್ಟಿನಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅವರು ಆಡಳಿತವನ್ನು ಹಳಿ ತಪ್ಪಿಸುತ್ತಿದ್ದಾರೆ. ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪರ್ಯಾಯ ಆಡಳಿತ ವ್ಯವಸ್ಥೆ ನಡೆಸುತ್ತಿದ್ದಾರೆ’ ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ಸಂವಿಧಾನದ ಪೀಠದ ನೇತೃತ್ವವನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು (ಈಗ ಸಿಜೆಐ) ವಹಿಸಿದ್ದು, ನ್ಯಾಯಮೂರ್ತಿಗಳಾದ ಎಂ.ಆರ್.ಶಾ. ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ.ಎಸ್‌.ನರಸಿಂಹ ಇತರ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.