ADVERTISEMENT

ಉತ್ತರ ಪ್ರದೇಶ: ದುರ್ಗಾ ಪೂಜೆ ವೇಳೆ ಅಗ್ನಿ ದುರಂತ; ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಪಿಟಿಐ
Published 5 ಅಕ್ಟೋಬರ್ 2022, 3:40 IST
Last Updated 5 ಅಕ್ಟೋಬರ್ 2022, 3:40 IST
ಅಗ್ನಿ ದುರಂತದ ಬಳಿಕ ಕಂಡುಬಂದ ಪೆಂಡಾಲ್‌ನ ದೃಶ್ಯ | ಪಿಟಿಐ ಚಿತ್ರ
ಅಗ್ನಿ ದುರಂತದ ಬಳಿಕ ಕಂಡುಬಂದ ಪೆಂಡಾಲ್‌ನ ದೃಶ್ಯ | ಪಿಟಿಐ ಚಿತ್ರ   

ಭದೋಹಿ: ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ದುರ್ಗಾ ಪೂಜೆ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. 12 ಮಂದಿಯ ಸ್ಥಿತಿ ಗಂಭೀರವಾಗಿದೆ.

ವಾರಾಣಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಗಾಯಾಳು ಮಂಗಳವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸಂಭವಿಸಿದ ದುರಂತದಲ್ಲಿ ಗಾಯಗೊಂಡ ಸುಮಾರು 23 ಮಂದಿ ವಾರಾಣಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಗಾಯಗೊಂಡವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಈ ಪೈಕಿ 12 ಮಂದಿಯ ಸ್ಥಿತಿ ಗಂಭೀರವಾಗಿದೆ. 6 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗೌರಂಗ್‌ ರಾಥಿ ಸುದ್ದಿಗಾರರಿಗೆ ಹೇಳಿದ್ದಾರೆ.

ADVERTISEMENT

ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಅಳವಡಿಸಿದ್ದ ಹ್ಯಾಲೋಜಿನ್‌ ಲೈಟ್‌ನ ಪ್ರಭಾವದಿಂದ ಬಿಸಿ ಹೆಚ್ಚಾಗಿ ಅಗ್ನಿ ದುರಂತ ಸಂಭವಿಸಿದೆ. ವೇದಿಕೆ ಮೇಲೆ ಡಿಜಿಟಲ್‌ ಶೋ ನಡೆಯುತ್ತಿದ್ದ ವೇಳೆ ಅವಘಡ ನಡೆದಿದೆ. ಮಿತಿಮೀರಿದ ಬಿಸಿಯಿಂದಾಗಿ ವಿದ್ಯುತ್‌ ವೈರ್‌ ಸುಟ್ಟು ಹೋಗಿದೆ, ಬಳಿಕ ಪೆಂಡಾಲ್‌ಗೆ ಬೆಂಕಿ ತಗುಲಿದೆ. ಮೃತರ ಪೈಕಿ ಮೂವರು ಮಕ್ಕಳು ಸೇರಿದ್ದಾರೆ.

ಅಗ್ನಿ ದುರಂತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎಚ್ಚರಿಕೆ ನೀಡಿದ್ದಾರೆ.

ಅವಘಡಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ. ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.