ADVERTISEMENT

ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

ಪಿಟಿಐ
Published 12 ಮೇ 2022, 13:24 IST
Last Updated 12 ಮೇ 2022, 13:24 IST
ಮದರಸಾ: ಐಸ್ಟಾಕ್ ಚಿತ್ರ
ಮದರಸಾ: ಐಸ್ಟಾಕ್ ಚಿತ್ರ   

ಲಖನೌ: ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಎಲ್ಲ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಗುರುವಾರದಿಂದ ಕಡ್ಡಾಯಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮದರಸಾ ಶಿಕ್ಷಣ ಮಂಡಳಿಯ ರಿಜಿಸ್ಟ್ರಾರ್ ಎಸ್.ಎನ್.ಪಾಂಡೆ ಅವರು ಮೇ 9 ರಂದು ಎಲ್ಲಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ.

ಮಾ.24ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ, ರಾಜ್ಯದಾದ್ಯಂತ ಎಲ್ಲ ಮದರಸಾಗಳಲ್ಲಿ ಪ್ರಾರ್ಥನೆಯ ವೇಳೆ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ADVERTISEMENT

ರಂಜಾನ್ ರಜೆಯ ನಂತರ ಮೇ 12 ರಂದು ಮದರಸಾಗಳಲ್ಲಿ ತರಗತಿಗಳು ಪ್ರಾರಂಭವಾಗಿದ್ದು, ಅದೇ ದಿನ ಆದೇಶವು ಜಾರಿಗೆ ಬಂದಿದೆ ಎಂದು ಅವರು ಹೇಳಿದರು.

ಮುಂಬರುವ ಶೈಕ್ಷಣಿಕ ಅವಧಿಯಿಂದ ತರಗತಿಗಳು ಪ್ರಾರಂಭವಾಗುವ ಮೊದಲು ರಾಜ್ಯದ ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದೇಶ ಪಾಲನೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ವಹಿಸಲಾಗಿದೆ.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದಿವಾನ್ ಸಾಹಬ್ ಜಮಾನ್ ಖಾನ್ ಮಾತನಾಡಿ, ಇಲ್ಲಿಯವರೆಗೆ ಮದರಸಾಗಳಲ್ಲಿ ಸಾಮಾನ್ಯವಾಗಿ ಹಮ್ದ್ (ಅಲ್ಲಾಹನಿಗೆ ಸ್ತುತಿ) ಮತ್ತು ಸಲಾಮ್ (ಮುಹಮ್ಮದ್ ಅವರಿಗೆ ನಮನ) ಮಾಡಿದ ಬಳಿಕ ತರಗತಿಗಳನ್ನು ಪ್ರಾರಂಭಭಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಕೆಲವೆಡೆ ರಾಷ್ಟ್ರಗೀತೆಯನ್ನೂ ಹಾಡಲಾಗಿತ್ತು, ಆದರೆ, ಅದು ಕಡ್ಡಾಯವಾಗಿರಲಿಲ್ಲ. ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.

ಮದರಸಾಗಳಲ್ಲಿ ರಾಷ್ಟ್ರೀಯತೆ ಬೋಧನೆಗೆ ಒತ್ತು ನೀಡಲಾಗುವುದು ಎಂದು ಕಳೆದ ತಿಂಗಳು ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಧರಂಪಾಲ್ ಸಿಂಗ್ ಹೇಳಿಕೆ ನೀಡಿದ್ದರು. ಅದರ ಬೆನ್ಲಲೇ ಈ ಆದೇಶ ಬಂದಿದೆ.

ಮದರಸಾದ ವಿದ್ಯಾರ್ಥಿಗಳು ದೇಶಭಕ್ತಿಯಿಂದ ತುಂಬಿರಬೇಕೆಂದು ಸರ್ಕಾರ ಬಯಸುತ್ತದೆ ಎಂದು ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಹೇಳಿದ್ದಾರೆ.

ಪ್ರಸ್ತುತ, ಉತ್ತರ ಪ್ರದೇಶದಲ್ಲಿ ಒಟ್ಟು 16,461 ಮದರಸಾಗಳಿದ್ದು, ಅವುಗಳಲ್ಲಿ 560 ಸರ್ಕಾರಿ ಅನುದಾನವನ್ನು ಪಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.