ಮಸೀದಿ ತೆರವು ಕಾರ್ಯಾಚರಣೆ
ಮೀರಠ್: ಇಲ್ಲಿನ ದೆಹಲಿ ರಸ್ತೆಯಲ್ಲಿ ಇದ್ದ ದಶಕಗಳಷ್ಟು ಹಳೆಯ ಮಸೀದಿಯನ್ನು ಪ್ರಾದೇಶಿಕ ರ್‍ಯಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್‌ಆರ್‌ಟಿಎಸ್) ಕಾರಿಡಾರ್ ನಿರ್ಮಾಣಕ್ಕಾಗಿ ಕೆಡವಲಾಯಿತು.
ಈ ಮಾರ್ಗದಲ್ಲಿ ಸಾಗಲಿರುವ ರ್‍ಯಾಪಿಡ್ ರೈಲು ಯೋಜನೆಗೆ ಮಸೀದಿ ಅಡೆತಡೆಯಾಗಿತ್ತು. ಹೀಗಾಗಿ ತೆರವಿಗೆ ಕ್ರಮ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ಹೇಳಿದರು.
‘ಮಸೀದಿ ಆಡಳಿತ ಮಂಡಳಿ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದವರ ಸಮ್ಮತಿ ಮೇರೆಗೆ ಮಸೀದಿ ತೆರವು ಕಾರ್ಯಕೈಗೊಳ್ಳಲಾಯಿತು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬ್ರಿಜೇಶ್ ಕುಮಾರ್ ಸಿಂಗ್ ತಿಳಿಸಿದರು.
‘ಮುಸ್ಲಿಂ ಸಮುದಾಯದ ಸದಸ್ಯರು ಗುರುವಾರ ಸುತ್ತಿಗೆಯಿಂದ ಮಸೀದಿ ಕೆಲ ಭಾಗಗಳನ್ನು ಕೆಡವಿದರು. ನಂತರ ಅದರ ರಚನೆಯನ್ನು ಕೆಡವಲಾಯಿತು. ಬಳಿಕ ಬುಲ್ಡೋಜರ್ ನೆರವಿನಿಂದ ಇಡೀ ಮಸೀದಿಯನ್ನು ಪೂರ್ಣವಾಗಿ ಕೆಡವಿ, ಅವಶೇಷಗಳನ್ನು ತೆರವುಗೊಳಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.
‘ಪರಸ್ಪರ ಒಪ್ಪಂದದೊಂದಿಗೆ ಈ ಕಾರ್ಯ ನಡೆದಿದೆ. ಬೇರೆಡೆ ಮಸೀದಿ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನು ಒದಗಿಸಿಲ್ಲ. ಈ ಕುರಿತು ಮುಸ್ಲಿಂ ಸಮುದಾಯದಿಂದ ಯಾವುದೇ ಪ್ರಸ್ತಾವವೂ ಬಂದಿಲ್ಲ’ ಎಂದು ಅವರು ಹೇಳಿದರು.
‘ಮಸೀದಿ ಎಷ್ಟು ವರ್ಷಗಳಷ್ಟು ಹಳೆಯದು ಎಂಬುದರ ಕುರಿತು ಸ್ಥಳೀಯರಲ್ಲಿ ಸ್ಪಷ್ಟತೆಯಿಲ್ಲ. ಕೆಲವರು 80 ವರ್ಷಗಳಷ್ಟು ಹಳೆಯದು ಎಂದರೆ, ಮತ್ತೆ ಕೆಲವರು 168 ವರ್ಷಗಳಷ್ಟು ಹಳೆಯದು ಎನ್ನುತ್ತಾರೆ’ ಎಂದು ಅವರು ತಿಳಿಸಿದರು.
‘ನಾವೇ ಮಸೀದಿಯನ್ನು ತೆರವುಗೊಳಿಸಿದ್ದೇವೆ. ಆದರೆ ಮಸೀದಿಯ ಐತಿಹಾಸಿಕತೆಯನ್ನು ಸಾಬೀತುಪಡಿಸುವ 1857ರ ದಾಖಲೆಗಳು ನಮ್ಮ ಬಳಿಯಿವೆ’ ಎಂದು ಮಸೀದಿಯ ಪ್ರತಿನಿಧಿ ಹಾಜಿ ಸ್ವಾಲೆ ಹೀನ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.