ಮುಜಫ್ಫರ್‌ನಗರ (ಪಿಟಿಐ): ಕಾವಡ್ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್‌ಗಳ ಮಾಲೀಕರ ಗುರುತನ್ನು ಬಹಿರಂಗಪಡಿಸುವಂತೆ ಒತ್ತಾಯಿಸುತ್ತಿದ್ದ ಆರೋಪದಲ್ಲಿ ಸ್ವಾಮಿ ಯಶವೀರ್ ಮಹಾರಾಜ್ ಅವರ 6 ಮಂದಿ ಅನುಯಾಯಿಗಳಿಗೆ ಸಮನ್ಸ್ ನೀಡಿರುವುದಾಗಿ ಪೊಲೀಸರು ಬುಧವಾರ ಹೇಳಿದ್ದಾರೆ.
ಜಿಲ್ಲಾಡಳಿತದ ಅನುಮತಿಯನ್ನೂ ಪಡೆಯದೇ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಹೋಟೆಲ್ ಸಿಬ್ಬಂದಿಯ ಗುರುತು ಪರಿಶೀಲನೆಗೆ ಮುಂದಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸುಮಿತ್ ಬಹ್ರಾಗಿ, ರೋಹಿತ್, ವಿವೇಕ್, ಸುಮಿತ್, ಸುನ್ನಿ ಹಾಗೂ ರಾಕೇಶ್ ಎಂಬವರಿಗೆ 3 ದಿನಗಳ ಒಳಗೆ ಠಾಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ. ಈ 6 ಮಂದಿ ಸ್ವಾಮಿ ಯಶವೀರ್ ಅವರ ಯೋಗ ಸಾಧನಾ ಯಶವೀರ ಆಶ್ರಮದ ಕಾರ್ಯಕರ್ತರು ಎಂದು ಪೊಲೀಸರು ಹೇಳಿದ್ದಾರೆ. ಇವರಲ್ಲದೇ, ವಿಡಿಯೊದಲ್ಲಿ ಕಂಡುಬಂದಿರುವ ಇತರರಿಗೂ ಶೀಘ್ರವೇ ಸಮನ್ಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಕಾವಡ್ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್‌ಗಳ ಮಾಲೀಕರ ಪೂರ್ವಪರ, ಗುರುತು ವಿಚಾರಿಸುವ ಅಭಿಯಾನಕ್ಕೆ ಭಾನುವಾರ ಸ್ವಾಮಿ ಯಶವೀರ್ ಚಾಲನೆ ನೀಡಿದರು ಎನ್ನಲಾಗಿದೆ.
ಭಯೋತ್ಪಾದನೆಗೆ ಸಮ: ಹಸನ್
‘ಯಾತ್ರಾ ಮಾರ್ಗದಲ್ಲಿರುವ ಹೋಟೆಲ್ ಮಾಲೀಕರು ಯಾವ ಧರ್ಮಕ್ಕೆ ಸೇರಿದವರೆಂದು ತಿಳಿಯಲು ಬಲವಂತವಾಗಿ ಅವರ ಹೆಸರು ಹೇಳುವಂತೆ ಪೀಡಿಸಲಾಗುತ್ತಿದೆ, ಅವರನ್ನು ವಿವಸ್ತ್ರಗೊಳಿಸಲಾಗುತ್ತಿದೆ. ಈ ಕೃತ್ಯಕ್ಕೂ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಕೃತ್ಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇದೂ ಒಂದು ರೀತಿಯ ಭಯೋತ್ಪಾದನೆ’ ಹೀಗೆಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಎಸ್.ಟಿ ಹಸನ್ ಹೇಳಿದ್ದಾರೆ.
ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಸ್ಥಳೀಯ ಹಿಂದೂ ಸಂಘಟನೆಗಳ ಸದಸ್ಯರು ಹೋಟೆಲ್ ಮಾಲೀಕರ ಗುರುತು ಬಹಿರಂಗ ಪಡಿಸಲು ಒತ್ತಾಯಿಸಿರುವ ವಿಡಿಯೊಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಸನ್ ಈ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.