ADVERTISEMENT

ಲಡ್ಡು ಕದ್ದ ಆರೋಪ: ಶಾಲೆಯಿಂದ ಬಾಲಕಿಯರಿಬ್ಬರ ಉಚ್ಚಾಟನೆ

ಉತ್ತರ ಪ್ರದೇಶ: ಶಾಲೆಯ ಪ್ರಾಂಶುಪಾಲರ ವಿರುದ್ಧ ಬಾಲಕಿಯರ ತಂದೆ ದೂರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 16:11 IST
Last Updated 13 ಸೆಪ್ಟೆಂಬರ್ 2024, 16:11 IST
<div class="paragraphs"><p>ಲಡ್ಡು</p></div>

ಲಡ್ಡು

   

ಲಖನೌ: ಲಡ್ಡುಗಳನ್ನು ಕಳವು ಮಾಡಿದ ಆರೋಪದಡಿ ಸಹರಾನ್‌ಪುರ ಜಿಲ್ಲೆಯ ಸಲ್ಹಾಪುರ ಗ್ರಾಮದಲ್ಲಿ ಇಬ್ಬರು ಬಾಲಕಿಯರನ್ನು ಶಾಲೆಯಿಂದ ಹೊರಹಾಕಲಾಗಿದೆ.

ಅಕ್ಕ–ತಂಗಿಯರೂ ಆಗಿರುವ ಈ ಬಾಲಕಿಯರು ಕ್ರಮವಾಗಿ 8 ಮತ್ತು 7ನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಯ ಪ್ರಾಂಶುಪಾಲರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಬಾಲಕಿಯರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಕಳೆದ ತಿಂಗಳು, ಸ್ವಾತಂತ್ರ್ಯ ದಿನಾಚರಣೆಯಂದು ಈ ಘಟನೆ ನಡೆದಿದೆ. ಬಾಲಕಿಯರ ಪಾಲಕರು ಈ ಕುರಿತು ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಗುರುವಾರ ಗೊತ್ತಾಗಿದೆ.

ಸ್ವಾತಂತ್ರ್ಯೋತ್ಸವ ದಿನದಂದು ಎಲ್ಲ ಮಕ್ಕಳಿಗೆ ಹಂಚಿದ ನಂತರವೂ ಉಳಿದಿದ್ದ ಲಡ್ಡುಗಳನ್ನು ಪ್ರಾಂಶುಪಾಲರ ಕಚೇರಿಯಲ್ಲಿ ಇಡಲಾಗಿತ್ತು. ಈ ಇಬ್ಬರು ಬಾಲಕಿಯರು ಕಚೇರಿ ಪ್ರವೇಶಿಸಿ, ಲಡ್ಡುಗಳನ್ನು ಕಳವು ಮಾಡಿದ್ದರು ಎಂದು ಆರೋಪಿಸಲಾಗಿದೆ.

‘ಬಾಲಕಿಯರ ವರ್ಗಾವಣೆ ಪ್ರಮಾಣಪತ್ರದಲ್ಲಿ ‘ಉತ್ತಮ ನಡತೆ ಹೊಂದಿಲ್ಲ’ ಎಂಬುದಾಗಿ ನಮೂದಿಸುವೆ. ಇದರಿಂದ ಅವರಿಗೆ ಬೇರೆ ಯಾವುದೇ ಶಾಲೆಯಲ್ಲಿ ಪ್ರವೇಶ ಸಿಗುವುದಿಲ್ಲ ಎಂಬುದಾಗಿ ಪ್ರಾಂಶುಪಾಲ, ಪಾಲಕರಿಗೆ ಬೆದರಿಕೆ ಹಾಕಿದ್ದರು’ ಎಂದೂ ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ‘ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ಅನಾರೋಗ್ಯ ಕಾರಣದಿಂದ ಪ್ರಾಂಶುಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಗೆ ಮರಳಿದ ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಶುಕ್ರವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.