ಅಮೆರಿಕವು ಗಡೀಪಾರು ಮಾಡಿರುವ ಅಕ್ರಮ ವಲಸಿಗರು ಅಮೃತಸರ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಶನಿವಾರ ರಾತ್ರಿ ಬಂದಿಳಿದ ನಂತರ ಪಂಜಾಬ್ ಪೊಲೀಸರು ಅವರನ್ನು ಕರೆದೊಯ್ದರು
–ಪಿಟಿಐ ಚಿತ್ರ
ಚಂಡೀಗಢ: ‘ನಮ್ಮ ಕಾಲುಗಳಿಗೆ ಸರಪಳಿ ಹಾಕಲಾಗಿತ್ತು, ಕೈಗಳಿಗೆ ಕೋಳ ತೊಡಿಸಲಾಗಿತ್ತು’ ಎಂದು ಅಕ್ರಮ ವಲಸಿಗರು ಎಂಬ ಕಾರಣಕ್ಕೆ ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರು ಹೇಳಿದ್ದಾರೆ.
116 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕ ಸೇನೆಯ ವಿಮಾನವು (ಸಿ–17) ಅಮೃತಸರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ 11.35ಕ್ಕೆ ಬಂದಿಳಿಯಿತು.
‘ಪ್ರಯಾಣದ ವೇಳೆ ನಮ್ಮ ಕಾಲುಗಳಿಗೆ ಸರಪಳಿ ಹಾಗೂ ಕೈಗಳಿಗೆ ಕೋಳ ಹಾಕಿದ್ದರು’ ಎಂದು ದಲ್ಜೀತ್ ಸಿಂಗ್ ಅವರು ಹೋಶಿಯಾರ್‌ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅವರು ಹೋಶಿಯಾರ್‌ಪುರ ಜಿಲ್ಲೆಯ ಕುರಾಲಾ ಕಲಾನ್ ಗ್ರಾಮದವರು.
‘ನಮ್ಮನ್ನು ‘ಡಂಕಿ ಮಾರ್ಗ’ದ ಮೂಲಕ ಅಮೆರಿಕಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವವರನ್ನು ಈ ಮಾರ್ಗದ ಮೂಲಕ ಕರೆದುಕೊಂಡು ಹೋಗುತ್ತಾರೆ. ಈ ಮಾರ್ಗ ಬಹಳ ಅಪಾಯಕಾರಿಯೂ ಆಗಿದೆ’ ಎಂದು ದಲ್ಜೀತ್ ಸಿಂಗ್ ವಿವರಿಸಿದರು.
‘ಟ್ರಾವೆಲ್ ಏಜೆಂಟ್‌ವೊಬ್ಬರು ನನ್ನ ಗಂಡನಿಗೆ ಮೋಸ ಮಾಡಿದ್ದಾರೆ. ನೇರ ವಿಮಾನದ ಮೂಲಕ ಅಮೆರಿಕಕ್ಕೆ ಕರೆದೊಯ್ಯುದಾಗಿ ಹೇಳಿದ್ದ ಏಜೆಂಟ್, ನಂತರ ಡಂಕಿ ಮಾರ್ಗದ ಮೂಲಕ ಕರೆದೊಯ್ದರು’ ಎಂದು ದಲ್ಜೀತ್ ಸಿಂಗ್ ಪತ್ನಿ ಕಮಲ್‌ಪ್ರೀತ್ ಕೌರ್ ದೂರಿದರು.
ಫೆಬ್ರುವರಿ 5ರಂದು ಮೊದಲ ತಂಡದಲ್ಲಿ ಬಂದಿಳಿದ್ದಿವರಿಗೂ ಪ್ರಯಾಣದ ಸಂದರ್ಭದಲ್ಲಿ ಕಾಲುಗಳಿಗೆ ಸರಪಳಿ ಹಾಗೂ ಕೈಗಳಿಗೆ ಕೋಳಗಳನ್ನು ಹಾಕಲಾಗಿತ್ತು.
ವ್ಯವಸ್ಥೆ: ಪಂಜಾಬ್ ಪೊಲೀಸರು ರಾಜ್ಯದವರನ್ನು ಭಾನುವಾರ ನಸುಕಿನ 4.30ರ ಸುಮಾರಿಗೆ ಕರೆದೊಯ್ದರೆ, ಹರಿಯಾಣ ಪೊಲೀಸರು ಸಹ ತಮ್ಮ ರಾಜ್ಯದವರನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದರು.
ಎರಡನೇ ವಿಮಾನದಲ್ಲಿ ವಾಪಸು ಬಂದಿರುವವರು 18ರಿಂದ 30 ವರ್ಷ ವಯೋಮಾನದವರಾಗಿದ್ದಾರೆ.
ಪಂಜಾಬ್‌ನ ಅನಿವಾಸಿ ಭಾರತೀಯರ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲೀವಾಲ್ ಹಾಗೂ ಇಂಧನ ಸಚಿವ ಹರ್ಭಜನ್ ಸಿಂಗ್ ಅವರು ವಿಮಾನ ನಿಲ್ದಾಣಕ್ಕೆ ತೆರಳಿ, ಅಮೆರಿಕದಿಂದ ಬಂದಿಳಿದವರನ್ನು ಭೇಟಿ ಮಾಡಿದರು.
ಅಮೆರಿಕದಿಂದ ಗಡೀಪಾರಾಗಿ ಬಂದವರಿಗೆ ವಂಚಿಸಿರುವ ಟ್ರಾವೆಲ್ ಏಜೆಂಟರಿಗೆ ಜೈಲು ಶಿಕ್ಷೆ ವಿಧಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ.–ಕುಲದೀಪ್ ಸಿಂಗ್ ಧಲೀವಾಲ್,ಪಂಜಾಬ್‌ನ ಅನಿವಾಸಿ ಭಾರತೀಯರ ವ್ಯವಹಾರಗಳ ಸಚಿವ
‘ನಮ್ಮ ಕನಸು ನುಚ್ಚು ನೂರಾಯ್ತು...’
‘ಉತ್ತಮ ಆದಾಯ ಗಳಿಸಿ ಸುಂದರ ಬದುಕುಕಟ್ಟಿಕೊಂಡು ಅಮೆರಿಕದಲ್ಲಿ ನೆಲಸಲು ಯೋಜಿಸಿದ್ದೆವು. ಈಗ ನೋಡಿದರೆ ನಮ್ಮ ಕನಸುಗಳೇ ನುಚ್ಚು ನೂರಾಗಿವೆ...’
– ಇದು ಅಮೆರಿಕ ವಾಪಸು ಕಳುಹಿಸಿರುವ ಅಕ್ರಮ ವಲಸಿಗರಲ್ಲಿ ಬಹುತೇಕರು ಹೇಳುವ ಮಾತು.
‘ಕಳೆದ ವರ್ಷ ಡಿ.17ರಂದು ಅಮೆರಿಕಕ್ಕೆ ತೆರಳಿದ್ದೆ. ಜನವರಿ 27ರಂದು ಗಡಿ ದಾಟುವಾಗ ಅಮೆರಿಕ ಅಧಿಕಾರಿಗಳು ನನ್ನನ್ನು ಬಂಧಿಸಿದರು. ನಂತರ 18 ದಿನ ನಮ್ಮನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ನಮ್ಮ ಮೊಬೈಲ್ ಫೋನ್‌ಗಳನ್ನು ಸಹ ಕಸಿದುಕೊಳ್ಳಲಾಗಿತ್ತು’ ಎಂದು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಚಾಂದೀವಾಲಾ ಗ್ರಾಮದ ಸೌರವ್ (20) ಹೇಳುತ್ತಾರೆ.
‘ಕಾನೂನುಬದ್ಧವಾಗಿಯೇ ನಮ್ಮನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗುವುದಾಗಿ ನಮಗೆ ಭರವಸೆ ನೀಡಲಾಗಿತ್ತು. ಆದರೆ ಹಾಗೆ ಮಾಡಲಿಲ್ಲ’ ಎಂದು ಗುರುದಾಸಪುರ ಜಿಲ್ಲೆ ಖನೋವಾಲ್ ಘುಮನ್ ಗ್ರಾಮದ ಹರ್ಜೀತ್ ಸಿಂಗ್ ಹೇಳುತ್ತಾರೆ. ಹೋಶಿಯಾರ್‌ಪುರ ಜಿಲ್ಲೆ ಬೋದಲ್ ಗ್ರಾಮದ ಮಂತಜ್ ಸಿಂಗ್ (22) ಕಪೂರ್ತಲ ಜಿಲ್ಲೆ ಬೇಹಬಲ್ ಬಹದ್ದೂರ್ ಗ್ರಾಮದ ಸಾಹಿಲ್ ಪ್ರೀತ್ ಸಿಂಗ್ ಸೇರಿದಂತೆ ಹಲವರ ಅನುಭವವೂ ಇದೇ ಆಗಿದೆ.
ಇಬ್ಬರು ಕೊಲೆ ಆರೋಪಿಗಳು
ಕಳೆದ ವರ್ಷ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳು ಕೂಡ ಅಮೆರಿಕದಿಂದ ಬಂದಿಳಿದವರಲ್ಲಿ ಸೇರಿದ್ದರು. ವಿಮಾನದಿಂದ ಇಳಿದ ತಕ್ಷಣವೇ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಟಿಯಾಲ ಜಿಲ್ಲೆಯ ರಾಜಪುರದ ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ ಹಾಗೂ ಪ್ರದೀಪ್ ಸಿಂಗ್ ಬಂಧಿತರು. ಅವರ ವಿರುದ್ಧ ರಾಜಪುರದಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಟರ್ಬನ್ ಧರಿಸಲು ಸಿಗದ ಅವಕಾಶ: ಎಸ್‌ಜಿಪಿಸಿ ಖಂಡನೆ
ಅಮೆರಿಕದಿಂದ ಗಡೀಪಾರು ಮಾಡಲಾದ ವಲಸಿಗರ ತಂಡದಲ್ಲಿದ್ದ ಸಿಖ್ಖರಿಗೆ ರುಮಾಲು (ಟರ್ಬನ್) ಧರಿಸಲು ಅವಕಾಶ ನೀಡದ ಅಲ್ಲಿನ ಅಧಿಕಾರಿಗಳ ನಡೆಯನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ತೀವ್ರವಾಗಿ ಖಂಡಿಸಿದೆ.
ಅಮೃತಸರಕ್ಕೆ ಬಂದಿಳಿದ ತಂಡದಲ್ಲಿದ್ದ ಕೆಲ ಸಿಖ್ಖರು ಟರ್ಬನ್ ಧರಿಸಿಲ್ಲದ ವಿಡಿಯೊ ಜಾಲತಾಣದಲ್ಲಿ ಹಂಚಿಕೆಯಾದ ಬಳಿಕ ಎಸ್‌ಜಿಪಿಸಿ ಈ ಕುರಿತು ಪ್ರತಿಕ್ರಿಯಿಸಿದೆ.
116 ವಲಸಿಗರಲ್ಲಿ ಪಂಜಾಬ್‌ನ 65 ಹರಿಯಾಣದ 33 ಮತ್ತು ಗುಜರಾತ್‌ನ ಎಂಟು ಮಂದಿ ಇದ್ದರು. ವಲಸಿಗರಿಗೆ ಲಂಗರ್ ಮತ್ತು ಬಸ್ ಸೇವೆಯನ್ನು ಒದಗಿಸಲು ನಿಯೋಜಿಸಲಾಗಿದ್ದ ಎಸ್‌ಜಿಪಿಸಿ ಅಧಿಕಾರಿಗಳು ಹೀಗೆ ಮರಳಿದ್ದ ತಂಡದಲ್ಲಿದ್ದ ಸಿಖ್ಖರಿಗೆ ದಸ್ತರ್ (ಟರ್ಬನ್) ಅನ್ನೂ ನೀಡಿದ್ದರು. ಅಮೆರಿಕಕ್ಕೆ ನಾವು ಅಕ್ರಮವಾಗಿ ಪ್ರವೇಶಿಸಿದ್ದಾಗ ಟರ್ಬನ್ ಅನ್ನು ತೆಗೆಯುವಂತೆ ನಮಗೆ ತಿಳಿಸಲಾಗಿತ್ತು ಎಂದು ಸಿಖ್ ವಲಸಿಗರೊಬ್ಬರು ಪ್ರತಿಕ್ರಿಯಿಸಿದರು.
ಅಮೆರಿಕ ಅಧಿಕಾರಿಗಳ ನಡೆಯನ್ನು ಎಸ್‌ಜಿಪಿಸಿ ಪ್ರಧಾನ ಕಾರ್ಯದರ್ಶಿ ಗುರ್‌ಚರಣ್ ಸಿಂಗ್ ಗ್ರೆವಾಲ್ ಖಂಡಿಸಿದ್ದು ‘ಟರ್ಬನ್ ಸಿಖ್ಖರ ಒಂದು ಭಾಗ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.