ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಮಾಯಾವತಿ ಮುಂದಿದೆ ಬಹುದೊಡ್ಡ ಸವಾಲು

ಕ್ಷೀಣಿಸಿದ ಬಿಎಸ್‌ಪಿ ಮತ ಗಳಿಕೆ; 2007ರ ತಂತ್ರಗಾರಿಕೆಯನ್ನು ಮತ್ತೆ ನೆಚ್ಚಿಕೊಂಡ ಪಕ್ಷ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 4:09 IST
Last Updated 2 ಡಿಸೆಂಬರ್ 2021, 4:09 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ   

ಲಖನೌ: ಉತ್ತರಪ್ರದೇಶದ 2022ರ ವಿಧಾನಸಭಾ ಚುನಾವಣೆಯು, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪಾಲಿಗೆ ಬಹು ದೊಡ್ಡ ಸವಾಲು ಎನಿಸಲಿದೆ.

ಪಕ್ಷದ ಹಲವು ಮುಖಂಡರು ಮಾಯಾವತಿ ಅವರನ್ನು ತೊರೆದಿದ್ದು, ಅತ್ಯಾಪ್ತರಾಗಿದ್ದವರೂ ಅವರ ಸಖ್ಯದಿಂದ ದೂರವಾಗಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ನಾಲ್ಕು ಸಲ ಮುಖ್ಯಮಂತ್ರಿ ಗದ್ದುಗೆ ಹಿಡಿದಿದ್ದ ಈ ನಾಯಕಿಗೆ ಬರಲಿರುವ ಚುನಾವಣೆಯು ಅವರ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಎದುರಾದ, ಬಹುಶಃ ಬಹು ದೊಡ್ಡ ಪಂಥಾಹ್ವಾನ.

‘ಬ್ರಾಹ್ಮಣರು–ದಲಿತರು–ಮುಸ್ಲಿಮರು’ ಎಂಬ ಸೂತ್ರದಡಿ 2007ರ ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದ ಬಿಎಸ್‌ಪಿ ನಾಯಕಿ ಮಾಯಾವತಿ, 403ರ ವಿಧಾನಸಭಾ ಕ್ಷೇತ್ರಗಳ ಪೈಕಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದ್ದರು. ಆದರೆ, ಮುಂದಿನ ಚುನಾವಣೆಗಳಲ್ಲೆಲ್ಲ ಅವರ ಪಕ್ಷವು ಮುಗ್ಗರಿಸುತ್ತಲೇ ಬಂದಿದೆ. 2012ರಲ್ಲಿ ಬಿಎಸ್‌ಪಿಗೆ ಕೇವಲ 80 ಸ್ಥಾನಗಳನ್ನು ಪಡೆಯಲು ಸಾಧ್ಯವಾದರೆ, 2017ರಲ್ಲಿ ಆ ಸಂಖ್ಯೆ 19ಕ್ಕೆ ಕುಸಿಯಿತು. ಪಕ್ಷದ 15ಕ್ಕೂ ಹೆಚ್ಚು ಶಾಸಕರು ಪಕ್ಷ ನಿಷ್ಠೆಯನ್ನು ಬದಲಿಸಿದ್ದಾರೆ ಇಲ್ಲವೇ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಉಚ್ಚಾಟನೆಗೊಂಡಿದ್ದರ ಫಲಿತಾಂಶವೇ ಪಕ್ಷದ ಈ ವ್ಯಥೆಗೆ ಕಾರಣವಾಯಿತು.

ADVERTISEMENT

ಒಂದು ಕಾಲಕ್ಕೆ ಮಾಯಾವತಿ ಅವರ ಆಪ್ತವಲಯದಲ್ಲಿದ್ದ, ಉತ್ತರ ಪ್ರದೇಶ ಬಿಎಸ್‌ಪಿ ಅಧ್ಯಕ್ಷ ರಾಮ್‌ ಅಚಲ್‌ ರಾಜಭರ್‌, ಲಾಲ್‌ಜಿ ವರ್ಮಾ ಅವರಂಥ ನಾಯಕರು ಆರು ಜನ ಬಿಎಸ್‌ಪಿ ಶಾಸಕರೊಂದಿಗೆ ಸಮಾಜವಾದಿ ಪಕ್ಷ (ಎಸ್‌ಪಿ) ಸೇರ್ಪಡೆಯಾದರು. ಅಷ್ಟೇ ಸಂಖ್ಯೆಯ ಶಾಸಕರು ಬಿಜೆಪಿ ಸೇರಿದರು.

ಆದಾಗ್ಯೂ, ರಾಜ್ಯದಲ್ಲಿ ಶೇ 10ರಷ್ಟು ಮತದಾರರನ್ನು ಒಳಗೊಂಡ ‘ಜಾಟವ’ (ಎಸ್‌ಸಿ) ಸಮುದಾಯದ ಪ‍್ರಶ್ನಾತೀತ ನಾಯಕಿ ಎಂದು ಈಗಲೂ ಮಾಯಾವತಿ ಅವರನ್ನೇ ಪರಿಗಣಿಸಲಾಗುತ್ತದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಬಿಎಸ್‌ಪಿಯ ಮತ ಗಳಿಕೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಲೇ ಬಂದಿದೆ. 2007ರಲ್ಲಿ ಅಧಿಕಾರಕ್ಕೆ ಬಂದಾಗ ಶೇ 30ರಷ್ಟಿದ್ದ ಮತ ಗಳಿಕೆ, 2012ರಲ್ಲಿ ಶೇ 26ಕ್ಕೆ ಕುಸಿಯಿತು. 2017ರಲ್ಲಿ ಶೇ 22ಕ್ಕೆ ಬಂದು
ನಿಂತಿತು.

ಜಾಟವ ಸಮುದಾಯವಲ್ಲದೇ, ಮುಸ್ಲಿಂ, ಇತರ ಹಿಂದುಳಿದ ವರ್ಗ ಹಾಗೂ ಇತರ ಎಸ್‌ಸಿ ಸಮುದಾಯಗಳ ಬೆಂಬಲವೂ ಬಿಎಸ್‌ಪಿಗೆ ಇತ್ತು. ಆದರೆ, ಕೆಲ ವರ್ಷಗಳಿಂದ ಅದು ಕ್ಷೀಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಕಡಿಮೆಯಾದರೂ ಆಶ್ಚರ್ಯವಿಲ್ಲ’ ಎನ್ನುತ್ತಾರೆ ಲಖನೌದ ರಾಜಕೀಯ ವಿಶ್ಲೇಷಕರೊಬ್ಬರು.

ಭೀಮ್‌ ಆರ್ಮಿ (ದಲಿತ ಸಂಘಟನೆ) ಸಂಸ್ಥಾಪಕ ಚಂದ್ರಶೇಖರ್‌ ಆಜಾದ್‌ ಅಲಿಯಾಸ್‌ ರಾವಣ್‌ ಕೂಡ ಇದೀಗ ಮಾಯಾವತಿ ಅವರಿಗೆ ರಾಜಕೀಯ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ವಿಶೇಷವಾಗಿ ಉತ್ತರಪ್ರದೇಶದ ‍ಪಶ್ಚಿಮ ಭಾಗದಲ್ಲಿ ಚಂದ್ರಶೇಖರ್‌ ಪ್ರಾಬಲ್ಯವಿದೆ. ಆದರೆ, ಆ ಪಕ್ಷದಿಂದ ಬಿಎಸ್‌ಪಿಗೆ ಹೊಡೆತ ಬೀಳುವ ಸಾಧ್ಯತೆಯನ್ನು ಮಾಯಾವತಿ ಅಲ್ಲಗಳೆದಿದ್ದಾರೆ.

ಬಿಎಸ್‌ಪಿ ಶಾಸಕ ಷಾ ಆಲಂ ಅಲಿಯಾಸ್‌ ಗುಡ್ಡು ಜಮಾಲ್‌ ಕೆಲ ದಿನಗಳ ಹಿಂದಷ್ಟೇ ಸಮಾಜವಾದಿ ಪಕ್ಷ ಸೇರಿದ್ದಾರೆ. ಅವರ ಪ್ರಕಾರ, ಈ ಬಾರಿ ಮುಸ್ಲಿಮರು ಮಾಯಾವತಿ ಅವರನ್ನು ಬೆಂಬಲಿಸುವುದಿಲ್ಲ. ‘ಬಿಜೆಪಿಯನ್ನು ಸೋಲಿಸುವ ಸ್ಥಿತಿಯಲ್ಲಿಯೂ ಅವರ ಪಕ್ಷವಿಲ್ಲ. ಆ ಸಾಮರ್ಥ್ಯವೇನಿದ್ದರೂ ಸಮಾಜವಾದಿ ಪಕ್ಷಕ್ಕಿದೆ’ ಎನ್ನುತ್ತಾರೆ ಅವರು.

ಆದರೆ, 2007ರಲ್ಲಿ ಯಶಸ್ಸನ್ನು ತಂದುಕೊಟ್ಟ ತಂತ್ರಗಾರಿಕೆಗೆ ಮರಳಿರುವ ಮಾಯಾವತಿ, ಬ್ರಾಹ್ಮಣ ಸಮುದಾಯವನ್ನು ತಮ್ಮತ್ತ ಸೆಳೆಯಲು ಈಗಾಗಲೇ ರಾಜ್ಯದ ವಿವಿಧೆಡೆ ಬ್ರಾಹ್ಮಣ ಸಮ್ಮೇಳನಗಳನ್ನು ನಡೆಸಿದ್ದಾರೆ.

ಕುಟುಂಬವಿಲ್ಲದವರಿಗೆಜನರ ಕಷ್ಟ ತಿಳಿಯದು:ಅಖಿಲೇಶ್‌ ಯಾದವ್‌

ಲಖನೌ: ತಮ್ಮ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರನ್ನು ಗುರಿಯಾಗಿಸಿ, ‘ಅಬ್ಬಾಜಾನ್‌’ ಎಂದು ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ‘ಕುಟುಂಬ ಇದ್ದವರಿಗೆ ಮಾತ್ರ ಜನರ ನೋವು–ಸಂಕಟ ತಿಳಿಯುತ್ತದೆ; ಇಲ್ಲದವರಿಗೆ, ಜನರ ನೋವೆಂದೂ ಅರ್ಥವಾಗದು’ ಎಂದು ಬುಧವಾರ ಹೇಳಿದ್ದಾರೆ.

ಲಖನೌದಿಂದ 200 ಕಿ.ಮೀ ದೂರದಲ್ಲಿರುವ ಬಾಂಡಾದಲ್ಲಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಖಿಲೇಶ್‌, ‘ಲಾಕ್‌ಡೌನ್‌ ಅವಧಿಯಲ್ಲಿ ಲಕ್ಷಾಂತರ ಜನರು ತಮ್ಮ ತಮ್ಮ ಊರಿಗೆ ನಡೆದುಕೊಂಡೇ ಹೋದರು. ಈ ಸರ್ಕಾರ, ಅವರಿಗೆ ಕನಿಷ್ಠ ಸಾರಿಗೆ ಸೌಕರ್ಯವನ್ನೂ ಕಲ್ಪಿಸಲಿಲ್ಲ. ಅಂಥವರಿಂದರೂ ಇಲ್ಲಿನ ಪೊಲೀಸರು ಹಣ ವಸೂಲಿ ಮಾಡಿದರು’ ಎಂದು ಹರಿಹಾಯ್ದರು.

ರೈತರಿಗೆ ರಸಗೊಬ್ಬರ ಪೂರೈಸಲೂ ಯೋಗಿ ನೇತೃತ್ವದ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ತಾವು, ಬಿಜೆಪಿ ಮುಖಂಡರಿಗಿಂತಲೂ ಹೆಚ್ಚು ಹಿಂದೂ ಭಕ್ತ ಎಂದಿದ್ದ ಅಖಿಲೇಶ್‌ ಹೇಳಿಕೆಯನ್ನು ಅಪಹಾಸ್ಯ ಮಾಡಿದ್ದ ಮುಖ್ಯಮಂತ್ರಿ ಯೋಗಿ, ‘ಹಾಗಿದ್ದರೆ, ಅಖಿಲೇಶ್‌ ಅವರ ಅಬ್ಬಾಜಾನ್‌ (ಮುಲಾಯಂ ಸಿಂಗ್‌ ಯಾದವ್‌), ಒಂದು ಹಕ್ಕಿಯೂ ಅಯೋಧ್ಯೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಏಕೆ ಹೇಳಿದ್ದರು?’ ಎಂದು ಪ್ರಶ್ನಿಸಿದ್ದರು.

1990ರಲ್ಲಿ, ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ ಮಾಡುವುದಾಗಿ ಕರಸೇವಕರು ಬೆದರಿಕೆ ಹಾಕಿದ ಸಂದರ್ಭದಲ್ಲಿ ಮುಲಾಯಂ ಸಿಂಗ್‌ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ಯೋಗಿ ಹೇಳಿಕೆಯಿಂದ ವ್ಯಗ್ರಗೊಂಡಿದ್ದ ಅಖಿಲೇಶ್‌, ಬಳಸುವ ಪದಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದ್ದರು. ‘ಮುಖ್ಯಮಂತ್ರಿಗೆ ತಾವಾಡುವ ಪದಗಳ ಬಗ್ಗೆ ನಿಗಾ ಇರಲಿ. ಇಲ್ಲದಿದ್ದಲ್ಲಿ ಅವರ ಬಗ್ಗೆ ನಾನೂ ಹೇಳಬೇಕಾಗುತ್ತದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.