ADVERTISEMENT

ಉತ್ತರ ಪ್ರದೇಶದಲ್ಲಿ ಬಸ್‌ಗೆ ಟ್ರಕ್‌ ಡಿಕ್ಕಿ: 18 ಸಾವು, 25 ಜನರಿಗೆ ಗಾಯ

ಏಜೆನ್ಸೀಸ್
Published 28 ಜುಲೈ 2021, 6:42 IST
Last Updated 28 ಜುಲೈ 2021, 6:42 IST
ಉತ್ತರ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಬಸ್‌– ಟ್ರಕ್ ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಬಸ್‌– ಟ್ರಕ್ ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.   

ಲಖನೌ/ ಬಾರಬಂಕಿ: ಆಕ್ಸಲ್‌ ಬ್ಲೇಡ್ ತುಂಡಾಗಿ ರಸ್ತೆಯಲ್ಲಿ ನಿಂತಿದ್ದ ಡಬಲ್‌ ಡಕ್ಕರ್‌ಗೆ, ವೇಗವಾಗಿ ಬಂದ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ, 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಕೊಟ್ವಾಲಿ ರಾಮ್‌ ಸಾನೆಹಿಘಾಟ್ ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ಬಸ್‌ನಲ್ಲಿದ್ದವರಲ್ಲಿ ಹೆಚ್ಚಿನವರು ಕಾರ್ಮಿಕರಾಗಿದ್ದು, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಕೆಲಸ ಮುಗಿಸಿಕೊಂಡು, ಪೂರ್ವ ಬಿಹಾರದಲ್ಲಿರುವ ತಮ್ಮೂರುಗಳತ್ತ ಮರಳುತ್ತಿದ್ದರು ಎಂದು ತಿಳಿದುಬಂದಿದೆ.

ರಸ್ತೆಯಲ್ಲಿ ಬಸ್‌ ನಿಲ್ಲಿಸಿದ್ದ ವೇಳೆಯಲ್ಲಿ ಕೆಲವರು ಬಸ್‌ನಿಂದ ಹೊರಗಡೆ ನಿಂತಿದ್ದರೆ, ಇನ್ನೂ ಕೆಲವರು ರಸ್ತೆ ಮೇಲೆ ಮಲಗಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ್ ಟ್ರಕ್‌ ಬಸ್‌ಗೆ ಡಿಕ್ಕಿ ಹೊಡೆಯಿತು. ಸ್ಥಳದಲ್ಲೇ 18 ಮಂದಿ ಸಾವನ್ನಪ್ಪಿದ್ದಾರೆ.

ADVERTISEMENT

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಹಾರ ಕಾರ್ಯಚರಣೆ ಕೈಗೊಂಡರು. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಲಖನೌ ವಲಯದ ಡಿಜಿಪಿ ಎಸ್‌.ಎನ್‌.ಸಬತ್‌ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ವೇಳೆಯಲ್ಲಿ ಭಾರಿ ಮಳೆಯಾಗುತ್ತಿತ್ತು. ಇದರಿಂದಾಗಿ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು ಎಂದು ಅವರು ತಿಳಿಸಿದರು.

ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಧಾನಿ ಸಂತಾಪ (ನವದೆಹಲಿ ವರದಿ): ಉತ್ತರ ಪ್ರದೇಶದ ಬಾರಾಬಂಕಿ ಸಮೀಪ ಬುಧವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿಯವರು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.