ಧರಾಲಿ(ಉತ್ತರಾಖಂಡ): ಧರಾಲಿಯಲ್ಲಿ ಬುಧವಾರವೂ ಭಾರಿ ಮಳೆ ಮುಂದುವರಿದಿದೆ. ಮಳೆ ನಡುವೆಯೇ ಮಂಗಳವಾರ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ನಡೆಸುತ್ತಿದ್ದಾರೆ.
ಹಠಾತ್ ಪ್ರವಾಹದಲ್ಲಿ ನಾಲ್ವರು ಮೃತಪಟ್ಟಿರುವುದು ಧೃಡಪಟ್ಟಿದೆ. ಸುಮಾರು130 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಅವಶೇಷದಡಿಯಿಂದ ಒಂದು ಶವವನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಧರಾಲಿ ಗ್ರಾಮದಲ್ಲಿ ನಡೆದ ಹರ್ ದೂದ್ ಜಾತ್ರೆಯಲ್ಲಿ ಅನೇಕರು ಪಾಲ್ಗೊಂಡಿದ್ದಾರೆ. ಆದ್ದರಿಂದ ಕಾಣೆಯಾಗಿರುವ ಸಂಖ್ಯೆ 60ಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ನಾಪತ್ತೆಯಾದವರ ಪತ್ತೆಗಾಗಿ ಭಾರತೀಯ ಸೇನೆಯು ತನ್ನ ಎಂಐ -17 ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.
‘ನಾಪತ್ತೆಯಾದವರಲ್ಲಿ 11 ಯೋಧರು ಸೇರಿದ್ದಾರೆ’ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ತಿಳಿಸಿದ್ದಾರೆ.
‘ತನ್ನ ಸೈನಿಕರು ಕಾಣೆಯಾಗಿದ್ದರೂ, ತಮ್ಮ ನೆಲೆ ಹಾನಿಗೊಂಡಿದ್ದರೂ ಸೈನ್ಯವು ಸಂಪೂರ್ಣ ಧೈರ್ಯ ಮತ್ತು ದೃಢನಿಶ್ಚಯದಿಂದ ಕೆಲಸ ಮಾಡುತ್ತಿದೆ’ ಎಂದು ಶ್ರೀವಾಸ್ತವ ಹೇಳಿದ್ದಾರೆ.
14 ರಾಜ್ ರಿಫ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷವರ್ಧನ್ ಅವರು 150 ಸೈನಿಕರ ತಂಡದೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದಾರೆ.
ಹಠಾತ್ ಪ್ರವಾಹಕ್ಕೆ ಧರಾಲಿ ಗ್ರಾಮದ ಅರ್ಧದಷ್ಟು ಭಾಗವು ನಾಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.