ADVERTISEMENT

ಉತ್ತರಾಖಂಡದಲ್ಲಿ ಭಾರಿ ಮಳೆ: ಮನೆ ಕುಸಿತದಿಂದ ಮೂವರು ಮಕ್ಕಳು ಸೇರಿ ಐವರು ಸಾವು

ಪಿಟಿಐ
Published 30 ಆಗಸ್ಟ್ 2021, 14:43 IST
Last Updated 30 ಆಗಸ್ಟ್ 2021, 14:43 IST
ಪಿಥೋರಗಡದ ಜುಮ್ಮಾ ಗ್ರಾಮದಲ್ಲಿ ಭಾರಿ ಮಳೆ ನಂತರ ಹಾನಿಗೊಳಗಾದ ಮನೆ
ಪಿಥೋರಗಡದ ಜುಮ್ಮಾ ಗ್ರಾಮದಲ್ಲಿ ಭಾರಿ ಮಳೆ ನಂತರ ಹಾನಿಗೊಳಗಾದ ಮನೆ   

ಪಿಥೋರಗಡ (ಉತ್ತರಾಖಂಡ): ಉತ್ತರಾಖಂಡದ ಧಾರ್ಚುಲಾ ಜಿಲ್ಲೆಯ ಉಪವಿಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೂರು ಮನೆಗಳು ಕುಸಿತಗೊಂಡಿವೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ಸಾವಿಗೀಡಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ತಡರಾತ್ರಿ ಜುಮ್ಮಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ಧಾವಿಸಿದ ಪಿಥೋರಗಡ ಜಿಲ್ಲಾಧಿಕಾರಿ ಆಶಿಷ್ ಚೌಹಾಣ್ ತಿಳಿಸಿದ್ದಾರೆ.

ಮೂವರು ಮಕ್ಕಳು ಸೇರಿದಂತೆ ಐವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಕಾಣೆಯಾದ ಮತ್ತಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌ಎಸ್‌ಬಿ ಕಮಾಂಡೆಂಟ್ ಎಂ.ಪಿ. ಸಿಂಗ್ ತಿಳಿಸಿದ್ದಾರೆ.

ADVERTISEMENT

ಪ್ರವಾಹ ಪೀಡಿತ ಪ್ರದೇಶದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಅಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಮತ್ತು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಗ್ರಾಮಕ್ಕೆ ವೈದ್ಯಕೀಯ ತಂಡವನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ನಾಪತ್ತೆಯಾಗಿರುವ ಎಲ್ಲ ವ್ಯಕ್ತಿಗಳು ಪತ್ತೆಯಾಗುವವರೆಗೆ ಮತ್ತು ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವವರೆಗೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿಯುತ್ತವೆ. ಹಾನಿಗೊಳಗಾದ ಗ್ರಾಮವು ಬೆಟ್ಟದ ತುದಿಯಲ್ಲಿರುವುದರಿಂದ ಸಾವು-ನೋವುಗಳು ಹೆಚ್ಚಾಗಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

'ಹೆಲಿಕಾಪ್ಟರ್ ಮೂಲಕ ನಾವು ಹಳ್ಳಿಯ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದೇವೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು, ಪೋಲಿಸ್ ಮತ್ತು ಕಂದಾಯ ತಂಡಗಳನ್ನು ಗ್ರಾಮಕ್ಕೆ ಕಳುಹಿಸಿ ಸಮರೋಪಾಧಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದೇವೆ' ಎಂದು ಜಿಲ್ಲಾಕಾರಿ ಚೌಹಾಣ್ ತಿಳಿಸಿದ್ದಾರೆ.

ಜುಮ್ಮಾ ಗ್ರಾಮದಲ್ಲಿ ಭಾರಿ ಮಳೆಯಿಂದ ಉಂಟಾದ ಹಾನಿಯ ಪ್ರಮಾಣವನ್ನು ತೀರ್ಮಾನಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚೌಹಾಣ್ ಮತ್ತು ಕುಮಾನ್ ಆಯುಕ್ತ ಸುಶೀಲ್ಕ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ. ಹಾನಿಗೊಳಗಾದ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಅವರಿಗೆ ಆಹಾರ ಮತ್ತು ಔಷಧಿಗಳ ಸಮರ್ಪಕ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಮುಚ್ಚಲ್ಪಟ್ಟ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳನ್ನು ಆದಷ್ಟು ಬೇಗ ತೆರವುಗೊಳಿಸಬೇಕು ಎಂದು ಕುಮಾನ್ ಆಯುಕ್ತರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.