ADVERTISEMENT

ಬಿಜೆಪಿ ಶಾಸಕನ ವಿರುದ್ಧದ ಅತ್ಯಾಚಾರ ಪ್ರಕರಣ: ತನಿಖೆ ಪೌರಿ ಜಿಲ್ಲೆಗೆ ವರ್ಗಾವಣೆ

ಪಿಟಿಐ
Published 18 ನವೆಂಬರ್ 2020, 11:46 IST
Last Updated 18 ನವೆಂಬರ್ 2020, 11:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡೆಹ್ರಾಡೂನ್‌: ಉತ್ತರಾಖಂಡ ರಾಜ್ಯದ ದ್ವಾರಹತ್‌ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್‌ ನೇಗಿ ಅವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಯನ್ನು ಡೆಹ್ರಾಡೂನ್‌ನಿಂದ ಪೌರಿ ಜಿಲ್ಲೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘ಸೂಕ್ತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು ಎನ್ನುವ ಉದ್ದೇಶದಿಂದ ತನಿಖೆಯನ್ನು ವರ್ಗಾಯಿಸಲಾಗಿದೆ’ ಎಂದು ಗರ್‌ವಾಲ್‌ ವಲಯ ಐಜಿಪಿ ಅಭಿನವ್‌ ಕುಮಾರ್‌ ತಿಳಿಸಿದರು. ‘ಈ ಪ್ರಕರಣದ ಜೊತೆಗೆ ಶಾಸಕರ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಮಹಿಳೆಯ ಮೇಲೆ ದಾಖಲಾಗಿರುವ ಬೆದರಿಕೆ ವಸೂಲಿ ಪ್ರಕರಣವನ್ನೂ ಪೌರಿ ಜಿಲ್ಲೆಗೆ ವರ್ಗಾಯಿಸಲಾಗಿದೆ. ಈ ಎರಡೂ ಪ್ರಕರಣಗಳ ತನಿಖೆಯನ್ನು ಶ್ರೀನಗರ ಮಹಿಳಾ ಪೊಲೀಸ್‌ ಠಾಣೆಯ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ’ ಎಂದು ಅಭಿನವ್‌ ಕುಮಾರ್‌ ಅವರು ತಿಳಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ನೇಗಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆ, ನೇಗಿ ಅವರು ಕೊಲೆ ಬೆದರಿಕೆ ಒಡ್ಡಿದ್ದರು ಎಂದೂ ಆರೋಪಿಸಿದ್ದರು. ‘ನನ್ನ ಮಗುವಿನ ತಂದೆ ನೇಗಿಯಾಗಿದ್ದು, ಡಿಎನ್‌ಎ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದ್ದರು. ‘ದೂರನ್ನು ಹಿಂಪಡೆಯಲು ಮಹಿಳೆ ₹5 ಕೋಟಿ ಹಣಕ್ಕೆ ಬೇಡಿಕೆ ಇರಿಸಿದ್ದಳು’ ಎಂದು ನೇಗಿ ಅವರ ಪತ್ನಿ ರೀಟಾ ಅವರು ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.