ADVERTISEMENT

ಪುಲ್ವಾಮಾ ದಾಳಿಗೆ ವರ್ಚುವಲ್‌ ಸಿಮ್‌ ಬಳಕೆ

ಪ್ರಕರಣದ ಮೂಲ ಪತ್ತೆಹಚ್ಚಲು ಅಮೆರಿಕದ ನೆರವು ಕೋರಿದ ಭಾರತ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 19:47 IST
Last Updated 24 ಮಾರ್ಚ್ 2019, 19:47 IST
ಸಿಮ್
ಸಿಮ್   

ಶ್ರೀನಗರ (ಪಿಟಿಐ): ಕೇಂದ್ರಿಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಮೇಲೆ ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ದಾಳಿ ನಡೆಸಿದ ಜೆಇಎಂ ದಾಳಿಕೋರ ‘ವರ್ಚುವಲ್‌ ಸಿಮ್‌’ ಬಳಸಿದ್ದು ದೃಢಪಟ್ಟಿದ್ದು, ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಅಮೆರಿಕಕ್ಕೆ ಭಾರತ ಮನವಿ ಸಲ್ಲಿಸಿದೆ.

ಭಯೋತ್ಪಾದನ ದಾಳಿ ನಡೆದ ಸ್ಥಳ ಹಾಗೂ ತ್ರಾಲ್‌ನಲ್ಲಿ ನಡೆದ ಎನ್‌ಕೌಂಟರ್‌ ನಡೆಸಿದ ಸ್ಥಳದಲ್ಲಿ ಜಮ್ಮು ಕಾಶ್ಮೀರ ಪೊಲೀಸರು, ರಾಷ್ಟ್ರೀಯ ತನಿಖಾದಳ (ಎನ್‌ಐಎ) ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಿಆರ್‌‍ಪಿಎಫ್‌ ಮೇಲೆ ದಾಳಿ ನಡೆಸಿದ್ದ ಆತ್ಮಾಹುತಿ ದಾಳಿಕೋರ ಅದಿಲ್‌ ದರ್‌, ವರ್ಚುವಲ್‌ ಸಿಮ್‌ ಬಳಸಿ ಗಡಿಭಾಗದಲ್ಲಿರುವ ಜೆಇಎಂ ಮುಖಂಡರ ಜತೆ ಸಂಪರ್ಕದಲ್ಲಿ ಇದ್ದಿದ್ದು ಖಚಿತಪಟ್ಟಿತ್ತು.

ಆತ್ಮಾಹುತಿ ದಾಳಿಯ ಪ್ರಮುಖ ಪಾತ್ರ ವಹಿಸಿದ್ದಮುದಾಸ್ಸೀರ್‌ ಖಾನ್‌ ತ್ರಾಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ. ಭಯೋತ್ಪಾದಕರು ತಮ್ಮ ಕುಕೃತ್ಯ ನಡೆಸಲು ವರ್ಚುವಲ್‌ ಸಿಮ್‌ ಬಳಸಿ ಯಶಸ್ವಿಯಾಗಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು.

ADVERTISEMENT

ಫೆ.14ರಂದು ಸಿಆರ್‌ಪಿಎಫ್‌ ಯೋಧರು ಸಾಗುತ್ತಿದ್ದ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದರು.

ಸಿಮ್‌ ಬಳಕೆ ಹೇಗೆ ?

ವರ್ಚುವಲ್‌ ಸಿಮ್‌ ಸೇವೆಯನ್ನು ಅಮೆರಿಕ ಒದಗಿಸುತ್ತದೆ. ಈ ತಂತ್ರಜ್ಞಾನದಲ್ಲಿ ಬಳಕೆದಾರರಿಗೆ ಬೇಕಾದ ದೂರವಾಣಿ ಸಂಖ್ಯೆಯನ್ನು ಕಂಪ್ಯೂಟರ್‌ ಸೃಷ್ಟಿಸುತ್ತದೆ. ಬಳಿಕ ಸ್ಮಾರ್ಟ್‌ಫೋನ್‌ನಲ್ಲಿ ಇದರ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಈ ದೂರವಾಣಿ ಸಂಖ್ಯೆಯನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟೆಲಿಗ್ರಾಂ ಹಾಗೂ ಟ್ವಿಟರ್‌ ಜೊತೆ ಸಂಪರ್ಕ ಕಲ್ಪಿಸಬೇಕು. ಯಾವುದಾದರೂ ಜಾಲತಾಣಕ್ಕೆ ಸಂಪರ್ಕ ಹೊಂದಿದ ಬಳಿಕ ಪ್ರಮಾಣೀಕರಣ ಸಂಖ್ಯೆ ನಮೂದಾಗುತ್ತದೆ. ಇದಾದ ನಂತರ ಸ್ಮಾರ್ಟ್‌ಫೋನ್‌ನಲ್ಲಿ ತಮಗೆ ಬೇಕಾದ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸಬಹುದು.

ಉಗ್ರರಿಂದಲೂ ವರ್ಚುವಲ್‌ ಸಿಮ್‌ ಬಳಕೆ: ಪುಲ್ವಾಮಾ ದಾಳಿ ನಡೆಸಿದ ಅದಿಲ್‌ ದರ್ ಹಾಗೂ ದಾಳಿಯ ಪ್ರಮುಖ ಸೂತ್ರಧಾರ ಮುದಾಸ್ಸೀರ್‌ ಖಾನ್‌ ಕೂಡ ಇದೇ ತಂತ್ರಜ್ಞಾನ ಬಳಸಿ ನಿರಂತರ ಸಂಭಾಷಣೆ ನಡೆಸಿದ್ದರು.

ಮಾಹಿತಿ ಕೋರಿಕೆ: ದಾಳಿಗೆ ಸಂಚು ರೂಪಿಸಲು ಉಗ್ರರು ಬಳಸಿದ ‘ವರ್ಚುವಲ್‌ ಸಿಮ್‌’ ಅನ್ನು ಕ್ರಿಯಾಶೀಲಗೊಳಿಸಿದವರು ಯಾರು ? ಇಂಟರ್‌ನೆಟ್‌ ಪ್ರೊಟೊಕಾಲ್‌ ಮಾಹಿತಿ ನೀಡಿ ಎಂದು ಭಾರತ ಸರ್ಕಾರ, ಅಮೆರಿಕವನ್ನು ಕೋರಿದೆ.

ಉಗ್ರರಿಗೆ ನೆರವು:₹7 ಕೋಟಿ ಮೌಲ್ಯದ ಆಸ್ತಿ ಪತ್ತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದವರ ₹7 ಕೋಟಿ ಮೌಲ್ಯದ ಆಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಈ ಆಸ್ತಿಯ ವರಮಾನವನ್ನು ಬಳಸಿಕೊಂಡು ಉಗ್ರರಿಗೆ ನೆರವು ನೀಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಷ್ಕರ್‌ ಎ ತಯಬಾ ಮುಖ್ಯಸ್ಥ ಹಫೀಜ್‌ ಸಯೀದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಸ್ಥಾಪಕ ಸಯ್ಯದ್‌ ಸಲಾಹುದ್ದೀನ್‌ ಸೇರಿದಂತೆ 13 ಮಂದಿಯನ್ನು ಕಾಶ್ಮೀರದಲ್ಲಿ ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿರುವವರು ಎಂದು ಎನ್ಐಎ ಗುರುತಿಸಿದೆ.

ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿರುವವರ ವಿರುದ್ಧ ನಡೆದ ಕಾರ್ಯಾಚರಣೆಯ ಅಂಗವಾಗಿ ತನಿಖಾಧಿಕಾರಿಗಳು ಇವರ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಪ್ರತ್ಯೇಕತಾವಾದಿ ನಾಯಕರಾದ ಅಫ್ತಾಬ್‌ ಅಹಮ್ಮದ್ ಶಾ, ಅಲ್ತಾಫ್‌ ಅಹಮ್ಮದ್‌ ಶಾ, ಮೊಹಮ್ಮದ್‌ ನಯೀಮ್‌ ಖಾನ್‌, ಫಾರುಖ್‌ ಅಹಮ್ಮದ್‌ ದಾರ್‌, ಉದ್ಯಮಿ ಜಾಹೂರ್‌ ಅಹಮ್ಮದ್‌ ಶಾ ವತಾಲಿ ಮತ್ತು ಮೊಹಮ್ಮದ್‌ ಅಕ್ಬರ್‌ ಖಾಂಡೆ ಪಟ್ಟಿಯಲ್ಲಿರುವ ಇತರರು.

ಇವರು ಪ್ರಮುಖ ಉಗ್ರ ಸಂಘಟನೆಗಳಿಗೆ, ಪ್ರತ್ಯೇಕತಾವಾದಿಗಳಿಗೆ ಹಾಗೂ ಕಲ್ಲು ತೂರಾಟ ನಡೆಸುವವರಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೂರ್‌ ಅಹಮ್ಮದ್‌ ಶಾನನ್ನು ಈ ಹಿಂದೆಯೇ ಎನ್‌ಐಎ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.