ADVERTISEMENT

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾಮುಕ್ತ ಪ್ರಯಾಣ ಘೋಷಿಸಿದ ಜರ್ಮನಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:52 IST
Last Updated 13 ಜನವರಿ 2026, 4:52 IST
ಪಾಸ್‌ಪೋರ್ಟ್
ಪಾಸ್‌ಪೋರ್ಟ್   

Germany has announced a visa-free transit facility for Indian passport holders

ನವದೆಹಲಿ: ಜರ್ಮನಿಯು ತನ್ನ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಪ್ರಯಾಣ ಸೌಲಭ್ಯವನ್ನು ಘೋಷಿಸಿದೆ. ಇದು ಭಾರತೀಯ ಪ್ರಜೆಗಳಿಗೆ ಅಂತರರಾಷ್ಟ್ರೀಯ ಪ್ರಯಾಣವನ್ನು ಗಮನಾರ್ಹವಾಗಿ ಸುಗಮಗೊಳಿಸುತ್ತದೆ. ಎರಡೂ ದೇಶಗಳ ನಡುವಿನ ಜನರ ಸಂಬಂಧವನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜರ್ಮನಿ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರ ಭಾರತ ಭೇಟಿಯ ಬೆನ್ನಲ್ಲೇ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ ಭಾರತ-ಜರ್ಮನಿ ಜಂಟಿ ಹೇಳಿಕೆಯಲ್ಲಿ ಈ ನಿರ್ಧಾರವನ್ನು ಘೋಷಿಸಿವೆ. ಇದು ಭಾರತಕ್ಕೆ ಮೆರ್ಜ್ ಅವರ ಮೊದಲ ಭೇಟಿಯಾಗಿದೆ.

ADVERTISEMENT

ಸರಳವಾಗಿ ಹೇಳುವುದಾದರೆ, ವೀಸಾ-ಮುಕ್ತ ಸಾರಿಗೆ ಸೌಲಭ್ಯ ಎಂದರೆ ಮತ್ತೊಂದು ದೇಶಕ್ಕೆ ಹೋಗುವ ಮಾರ್ಗದಲ್ಲಿ ಜರ್ಮನ್ ವಿಮಾನ ನಿಲ್ದಾಣಗಳ ಮೂಲಕ ಹಾದುಹೋಗುವ ಭಾರತೀಯ ಪ್ರಯಾಣಿಕರು ಇನ್ನು ಮುಂದೆ ಪ್ರತ್ಯೇಕ ಸಾರಿಗೆ ವೀಸಾಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ಇದು ಪ್ರಯಾಣವನ್ನು ಸುಗಮ, ತ್ವರಿತಗೊಳಿಸುತ್ತದೆ ಎಂದು ವರದಿ ತಿಳಿಸಿದೆ.

ಈ ನಿರ್ಧಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಜರ್ಮನಿ ಚಾನ್ಸೆಲರ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಕ್ರಮವು ಭಾರತೀಯ ಪ್ರಜೆಗಳ ಪ್ರಯಾಣವನ್ನು ಸುಗಮಗೊಳಿಸುವುದಲ್ಲದೆ, ಜನರಿಂದ ಜನರಿಗೆ ಇರುವ ಸಂಪರ್ಕವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಬಲಿಷ್ಠ ಜನರಿಂದ ಜನರಿಗೆ ಇರುವ ಸಂಬಂಧಗಳು ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿವೆ ಎಂದು ಇಬ್ಬರೂ ನಾಯಕರು ಪುನರುಚ್ಚರಿಸಿದ್ದಾರೆ.

ವಿದ್ಯಾರ್ಥಿಗಳು, ಸಂಶೋಧಕರು, ನುರಿತ ವೃತ್ತಿಪರರು, ಕಲಾವಿದರು ಮತ್ತು ಪ್ರವಾಸಿಗರ ಹೆಚ್ಚುತ್ತಿರುವ ವಿನಿಮಯವನ್ನು ಎರಡೂ ಕಡೆಯವರು ಸ್ವಾಗತಿಸಿದರು. ಅಲ್ಲದೆ, ಜರ್ಮನಿಯ ಆರ್ಥಿಕತೆ, ನಾವೀನ್ಯತೆ ಮತ್ತು ಸಾಂಸ್ಕೃತಿಕ ಜೀವನಕ್ಕೆ ಭಾರತೀಯ ಸಮುದಾಯದ ಅಮೂಲ್ಯ ಕೊಡುಗೆಯನ್ನುಕೊಂಡಾಡಿದರು. ಪರಸ್ಪರ ಅರಿನ್ನು ಗಾಢವಾಗಿಸಲು ಶಿಕ್ಷಣ, ಸಂಶೋಧನೆ, ವೃತ್ತಿಪರ ತರಬೇತಿ, ಸಂಸ್ಕೃತಿ ವಿನಿಮಯಗಳಲ್ಲಿ ಸಹಕಾರವನ್ನು ವಿಸ್ತರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.