ನವದೆಹಲಿ: ಗಾಯಕ ಟಿ.ಎಂ. ಕೃಷ್ಣ ಅವರನ್ನು ‘ಸಂಗೀತ ಕಲಾನಿಧಿ ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ’ಗೆ ಭಾಜನರಾದವರು ಎಂದು ಪರಿಗಣಿಸುವಂತಿಲ್ಲ ಎಂಬ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಿದೆ.
ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ. ಶ್ರೀನಿವಾಸನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಸುಬ್ಬುಲಕ್ಷ್ಮಿ ಅವರಿಗೆ ಅಗೌರವ ಸೂಚಿಸುವಂತಹ ಹೇಳಿಕೆಗಳನ್ನು ಕೃಷ್ಣ ಅವರು ನೀಡಿದ್ದಾರೆ ಎಂದು ಶ್ರೀನಿವಾಸನ್ ಅವರು ಅರ್ಜಿಯಲ್ಲಿ ದೂರಿದ್ದಾರೆ.
‘ಸುಬ್ಬುಲಕ್ಷ್ಮಿ ಅವರು ಸಂಗೀತಪ್ರಿಯರ ನಡುವೆ ಎಲ್ಲೆಡೆ ಹೊಂದಿರುವ ಗೌರವವು ನ್ಯಾಯಾಲಯಕ್ಕೆ ತಿಳಿದಿದೆ. ಅವರು ಅತ್ಯಂತ ಪ್ರಸಿದ್ಧರಾದ ಗಾಯಕರಲ್ಲಿ ಒಬ್ಬರು. 2004ರ ಡಿಸೆಂಬರ್‌ನಲ್ಲಿಯೇ ಅವರು ಮೃತಪಟ್ಟಿದ್ದಾರಾದರೂ ಅವರ ಮಧುರ ಧ್ವನಿಯು ಅಭಿಮಾನಿಗಳ ಪಾಲಿಗೆ ಬಹಳ ಆನಂದ ತರುತ್ತಿದೆ’ ಎಂದು ಪೀಠವು ಹೇಳಿದೆ.
‘ಪ್ರಶಸ್ತಿಯನ್ನು ಈಗಾಗಲೇ ಪ್ರದಾನ ಮಾಡಿ ಆಗಿರುವ ಕಾರಣ ಮಧ್ಯಂತರ ಕ್ರಮವಾಗಿ, ಕೃಷ್ಣ ಅವರನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತ ಎಂದು ಪರಿಗಣಿಸಬಾರದು’ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಕೃಷ್ಣ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುವುದನ್ನು ತಡೆಹಿಡಿಯಬೇಕು ಎಂಬ ಮಧ್ಯಂತರ ಆದೇಶವನ್ನು ಮದ್ರಾಸ್ ಹೈಕೋರ್ಟ್ ಅನೂರ್ಜಿತಗೊಳಿಸಿತ್ತು. ಹೈಕೋರ್ಟ್‌ನ ಈ ಕ್ರಮವನ್ನು ಶ್ರೀನಿವಾಸನ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ಪೀಠವು ಕೃಷ್ಣ ಅವರಿಗೆ, ಚೆನ್ನೈ ಸಂಗೀತ ಅಕಾಡೆಮಿ ಹಾಗೂ ಪ್ರಶಸ್ತಿಯ ಪ್ರಾಯೋಜಕರಿಗೆ ನೋಟಿಸ್ ಜಾರಿಗೆ ಸೂಚಿಸಿದೆ, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದೆ.
ಸುಬ್ಬುಲಕ್ಷ್ಮಿ ಅವರ ಹೆಸರು ಹಾಳುಮಾಡುವ ರೀತಿಯಲ್ಲಿ ಕೃಷ್ಣ ಅವರು ಲೇಖನ ಬರೆದಿದ್ದಾರೆ ಎಂಬ ಆರೋಪ ಇದ್ದು, ಇದೊಂದು ಅಸಾಮಾನ್ಯ ಪ್ರಕರಣ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ್ ಅವರು ವಿವರಿಸಿದ ನಂತರ ಪೀಠವು ಈ ಆದೇಶ ನೀಡಿದೆ.
ಕೃಷ್ಣ ಅವರು ಸುಬ್ಬುಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ‘ಕೆಟ್ಟ, ನಿಂದನೆಯ ಹಾಗೂ ಮಾನಹಾನಿ ಉಂಟುಮಾಡುವಂತಹ’ ದಾಳಿ ನಡೆಸಿದ್ದಾರೆ, ಸುಬ್ಬುಲಕ್ಷ್ಮಿ ಅವರ ಹೆಸರಿಗೆ ಹಾನಿ ಉಂಟುಮಾಡಿದ್ದಾರೆ. ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಶ್ರೀನಿವಾಸನ್ ಅವರು ಕೋರಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.