
ನವದೆಹಲಿ: ‘ಸುಪ್ರೀಂ ಕೋರ್ಟ್ ಇರುವುದು ಜನಸಾಮಾನ್ಯರಿಗಾಗಿ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಶನಿವಾರ ಮಹತ್ವದ ಸಂದೇಶ ರವಾನಿಸಿದರು.
‘ಸಾಮಾನ್ಯ ಕಕ್ಷಿದಾರನಿಗೂ ಸುಪ್ರೀಂನಲ್ಲಿ ಸಮಯ ಮತ್ತು ಸ್ಥಳಾವಕಾಶವಿದೆ. ಅದಕ್ಕಾಗಿ ಆದ್ಯತೆಯ ವಿಷಯಗಳನ್ನು ಪಟ್ಟಿ ಮಾಡುತ್ತಿದ್ದೇವೆ. ನಾನೊಬ್ಬನೇ ಇದನ್ನು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.
‘ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಕುರಿತು ಏಕೀಕೃತ ರಾಷ್ಟ್ರೀಯ ನ್ಯಾಯಾಂಗ ನೀತಿ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವುದು ಹಾಗೂ ಕಾಲಮಿತಿಯೊಳಗೆ ಇಂತಹ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸುವುದು ನನ್ನ ಆದ್ಯತೆ’ ಎಂದು ಅವರು ಹೇಳಿದರು.
‘ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗ’ದಲ್ಲಿ ಮಾತನಾಡಿದ ಅವರು, ‘ಕಾನೂನು ಹೋರಾಟಕ್ಕೆ ತಗಲುವ ವೆಚ್ಚವನ್ನು ತಗ್ಗಿಸುವುದು ಮತ್ತು ಪ್ರಕರಣಗಳ ವಿಚಾರಣೆಯನ್ನು ನ್ಯಾಯಸಮ್ಮತವಾದ ಕಾಲಮಿತಿಯೊಳಗೆ ಪೂರ್ಣಗೊಳಿಸುವುದನ್ನು ಖಾತರಿಪಡಿಸುವುದು ನನ್ನ ಆದ್ಯತೆ’ ಎಂದು ಒತ್ತಿ ಹೇಳಿದರು.
‘ಎಲ್ಲ ಪ್ರಕರಣಗಳ ಇತ್ಯರ್ಥವಾಗಬೇಕು ಎಂದು ನಾನು ಹೇಳುತ್ತಿಲ್ಲ; ಅದು ಸಾಧ್ಯವೂ ಇಲ್ಲ. ಏಕೆಂದರೆ ನ್ಯಾಯದಾನವು ಸದಾ ಚಾಲ್ತಿಯಲ್ಲಿರುವ ಇರುವ ಪ್ರಕ್ರಿಯೆ. ಜನರಿಗೆ ನ್ಯಾಯ ವ್ಯವಸ್ಥೆಯ ಬಗ್ಗೆ ನಂಬಿಕೆ ಮತ್ತು ವಿಶ್ವಾಸ ಇದೆ’ ಎಂದು ಹೇಳಿದರು.
‘ಹೊಸದಾಗಿ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇರುತ್ತವೆ. ಹಳೆಯ ವ್ಯಾಜ್ಯಗಳೂ ಇರುತ್ತವೆ. ಹೀಗಾಗಿ ಅರ್ಜಿಗಳ ವಿಲೇವಾರಿ ಕಷ್ಟ. ಇಂಥ ಸಂದರ್ಭದಲ್ಲಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಸಾಧ್ಯತೆಯ ಬಗ್ಗೆ ಗಮನಹರಿಸುವುದು ಮುಖ್ಯ. ಈ ಪ್ರಕ್ರಿಯೆಯು ನ್ಯಾಯಾಂಗ ವ್ಯವಸ್ಥೆಯ ಪಾಲಿಗೆ ‘ಗೇಮ್ ಚೇಂಜರ್’ ಆಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.
‘ಸುಪ್ರೀಂ ಕೋರ್ಟ್‌ನಲ್ಲಿ ಮುಂಬರುವ ದಿನಗಳಲ್ಲಿ ಆದ್ಯತೆಯ ಮೇರೆಗೆ ಕೆಲವು ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದೂ ಸೇರಿದಂತೆ ಹಲವು ಸುಧಾರಣೆಗಳಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
ನ್ಯಾಯಾಂಗದ ಸ್ವತಂತ್ರದ ಕುರಿತು ಮಾತನಾಡಿದ ಅವರು ಅಧಿಕಾರ ವಿಭಜನೆಯ ಸಂವಿಧಾನಾತ್ಮಕ ತತ್ವವನ್ನು ಉಲ್ಲೇಖಿಸಿ, ‘ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಪಾತ್ರಗಳನ್ನು ಸುಂದರವಾಗಿ ವಿವರಿಸಿದೆ. ಅಲ್ಲಿ ಒಂದರ ಮೇಲೆ ಇನ್ನೊಂದರ ಅತಿಕ್ರಮಣಕ್ಕೆ ಆಸ್ಪದವೇ ಇಲ್ಲ’ ಎಂದು ತಿಳಿಸಿದರು.
ಡಿಜಿಟಲ್ ಅರೆಸ್ಟ್ ಮತ್ತು ಸೈಬರ್ ಅಪರಾಧ ಪ್ರಕರಣಗಳಿಂದಾಗಿ ನ್ಯಾಯಾಂಗ ವ್ಯವಸ್ಥೆಯು ಹೊಸ ಸವಾಲು ಎದುರಿಸುತ್ತಿದೆ. ಇದಕ್ಕಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಉನ್ನತೀಕರಿಸಬೇಕಾದ ಅಗತ್ಯವಿದೆಸೂರ್ಯ ಕಾಂತ್ ಸಿಜೆಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.