ADVERTISEMENT

ವಕ್ಫ್‌ ಮಸೂದೆ: ರಾಷ್ಟ್ರಪತಿ ಮೊರೆಹೋದ ಮುಸ್ಲಿಂ ಲೀಗ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 16:08 IST
Last Updated 5 ಏಪ್ರಿಲ್ 2025, 16:08 IST
<div class="paragraphs"><p>ದ್ರೌಪದಿ ಮುರ್ಮು</p></div>

ದ್ರೌಪದಿ ಮುರ್ಮು

   

–ಪಿಟಿಐ ಚಿತ್ರ

ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಬಾರದು ಎಂದು ಮುಸ್ಲಿಂ ಲೀಗ್‌ನ ಐವರು ಸಂಸದರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶನಿವಾರ ಒತ್ತಾಯಿಸಿದ್ದಾರೆ. ‘ಅಸಾಂವಿಧಾನಿಕವಾದ ಈ ಮಸೂದೆಯು ಜಾರಿಗೆ ಬರುವುದನ್ನು ತಡೆಯಬೇಕು’ ಎಂದು ಅವರು ಕೋರಿದ್ದಾರೆ.

ADVERTISEMENT

ಅಂಕಿತ ಹಾಕುವುದನ್ನು ತಡೆಹಿಡಿಯಬೇಕು ಅಥವಾ ಮಸೂದೆಯು ಸಂವಿಧಾನದ ತತ್ವಗಳಿಗೆ ಅನುಗುಣವಾಗಿ ರೂಪುಗೊಳ್ಳುವಂತೆ ಮಾಡಲು ಸಂಸತ್ತಿನ ಮರುಪರಿಶೀಲನೆಗೆ ವಾಪಸ್ ಕಳುಹಿಸಬೇಕು. ಮಸೂದೆಯು ಈಗಿನ ಸ್ವರೂಪದಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ, ಮುಸ್ಲಿಮರಿಗೆ ತಾರತಮ್ಯ ಎಸಗುತ್ತದೆ ಎಂದು ಅವರು ಹೇಳಿದ್ದಾರೆ.

ಮಸೂದೆಯು ಸಂವಿಧಾನದ 26ನೆಯ ವಿಧಿ (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ), 25ನೆಯ ವಿಧಿ (ಧಾರ್ಮಿಕ ಸ್ವಾತಂತ್ರ್ಯ) ಮತ್ತು 14ನೆಯ ವಿಧಿಯನ್ನು (ಕಾನೂನಿನ ಎದುರು ಎಲ್ಲರೂ ಸಮಾನ) ಉಲ್ಲಂಘಿಸುತ್ತದೆ. ಮಸೂದೆಯ ಕೆಲವು ಅಂಶಗಳು ನ್ಯಾಯಾಂಗದ ಕೆಲವು ತೀರ್ಪುಗಳನ್ನು ಮೀರುತ್ತಿವೆ, ಕಾನೂನಿನ ಮೂಲಕ ಪರಿಹಾರ ಕೋರುವ ಅವಕಾಶವನ್ನು ದುರ್ಬಲಗೊಳಿಸುವಂತೆ ಇವೆ ಎಂದು ಎರಡು ಪುಟಗಳ ಪತ್ರದಲ್ಲಿ ಸಂಸದರು ದೂರಿದ್ದಾರೆ.

ಸಂಸದರಾದ ಇ.ಟಿ. ಮೊಹಮ್ಮದ್ ಬಶೀರ್, ಅಬ್ದುಸ್ಸಮದ್ ಸಮದಾನಿ, ಕೆ. ನವಾಸ್ ಕಾನಿ, ಪಿ.ವಿ. ಅಬ್ದುಲ್ ವಹಾಬ್ ಮತ್ತು ಹಾರಿಸ್ ಬೀರನ್ ಅವರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

ಕೇಂದ್ರ ವಕ್ಫ್‌ ಪರಿಷತ್ತು ಹಾಗೂ ರಾಜ್ಯ ವಕ್ಫ್‌ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸಲು ಮಸೂದೆಯು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಈ ಮಸೂದೆಯು, ತಮ್ಮ ಧಾರ್ಮಿಕ ಸಂಸ್ಥೆಗಳನ್ನು ಸ್ವಾಯತ್ತವಾಗಿ ನಡೆಸುವ ಮುಸ್ಲಿಮರ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೂ ದೇವಸ್ಥಾನಗಳು, ಸಿಖ್ ಗುರುದ್ವಾರಗಳು ಅಥವಾ ಇತರ ಧರ್ಮದವರ ದತ್ತಿ ಸಂಸ್ಥೆಗಳ ವಿಚಾರದಲ್ಲಿ ‘ಪರ್ಯಾಯ ಹಸ್ತಕ್ಷೇಪಕ್ಕೆ’ ಅವಕಾಶ ಇಲ್ಲ. ಹೀಗಾಗಿ ಈ ಮಸೂದೆಯು ಮುಸ್ಲಿಮರನ್ನು ತಾರತಮ್ಯದಿಂದ ಕಾಣುತ್ತದೆ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.